
ಶಾಸಕದ್ವಯರಿಂದ ಸಚಿವರಿಗೆ ಕ್ಷೇತ್ರದ ಪರವಾಗಿ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಯಳ್ಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಿಸುವಂತೆ ಕೋರಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಕೆರೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವಂತೆ ಕೋರಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಕಾನೂನು ಮತ್ತು ಸಂಸದಿಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ. ಸಿ. ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಬುಧವಾರ ಬೆಳಗಾವಿ ಭೇಟಿ ನೀಡಿದ್ದ ಮಾಧುಸ್ವಾಮಿ ಅವರನ್ನು ಭೇಟಿ ಮಾಡಿದ ಶಾಸಕರಿಬ್ಬರೂ ತಮ್ಮ ತಮ್ಮ ಕ್ಷೇತ್ರದ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು. ಯಳ್ಳೂರಿನಲ್ಲಿ ಬಹಳ ಕಾಲದಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಅರವಳಿ ಡ್ಯಾಂ ನೀರನ್ನು ತರುವ ಕುರಿತು ಎಂಜಿನಿಯರ್ಸ್ ಸರ್ವೆ ನಡೆಸಿದ್ದಾರೆ. ಯಳ್ಳೂರಿಗೆ ಸಾಕಾಗುವಷ್ಟು ನೀರಿನ ಲಭ್ಯತೆ ಇರುವುದಾಗಿ ವರದಿ ಕೊಟ್ಟಿದ್ದಾರೆ. ಜಲಾಶಯವನ್ನು ಇನ್ನಷ್ಟು ಆಳ ಮತ್ತು ಅಗಲ ಮಾಡಬೇಕಿದ್ದು ಇದಕ್ಕಾಗಿ 15 ಕೋಟಿ ರೂ. ವೆಚ್ಚವಾಗಲಿದೆ. ಈ ಪ್ರಸ್ತಾವನೆಯನ್ನು ಮುಂಬರುವ ಸಚಿವಸಂಪುಟ ಸಭೆಯಲ್ಲಿ ಮಂಡಿಸಿ, ಅನುಮೋದಿಸಬೇಕೆಂದು ಅಭಯ ಪಾಟೀಲ ಕೋರಿದರು.
ಕೆರೆಗಳ ಅಭಿವೃದ್ಧಿಗೆ ಶಾಸಕ ಅನಿಲ ಬೆನಕೆ ಮನವಿ
ಅತೀವೃಷ್ಠಿಯಿಂದಾಗಿ ಹಾನಿಗೊಳಗಾದ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕ ಅನಿಲ ಬೆನಕೆ ಮನವಿ ಸಲ್ಲಿಸಿದರು.
ನಗರದಲ್ಲಿ ಇತ್ತೀಚೇಗೆ ಉಂಟಾದ ಅತೀವೃಷ್ಠಿಯಿಂದಾಗಿ ನಗರದ ಹೊರವಲಯದ ಬಸವನಕುಡಚಿಯ ೩ ಕೆರೆಗಳು, ಅಲಾರವಾಡ, ಕಣಬರ್ಗಿ ಹಾಗೂ ಮುತ್ಯಾನಟ್ಟಿಯಲ್ಲಿ ತಲಾ ಒಂದು ಕೆರೆಗಳು ಹೀಗೆ ಒಟ್ಟು ೯ ಕೆರೆಗಳು ಮಳೆ ಹಾಗೂ ಪ್ರವಾಹದಿಂದ ಕೊಚ್ಚಿ ಹಾನಿಗೊಳಗಾಗಿವೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗಿದ್ದು 30 ಕೋಟಿ ರೂ ವಿಶೇಷ ಅನುದಾನ ನೀಡಬೇಕು ಎಂದು ವಿನಂತಿಸಿದರು.
ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಬೆಳಗಾವಿಯಲ್ಲಿ ಅತೀ ಹೆಚ್ಚು ಹಾನಿಯಾಗಿರುವುದು ಕಂಡು ಬಂದಿದ್ದು ವರದಿಯ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚಿಸಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ