Belagavi NewsBelgaum NewsPolitics

*ವೈನ್‌ಶಾಪ್‌ಗೆ ಪರವಾನಿಗೆ ನೀಡದಂತೆ ಸಚಿವರಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ಪ್ರಾರಂಭಿಸುತ್ತಿರುವ ವೈನ್‌ಶಾಪ್‌ಗೆ ಪರವಾನಿಗೆ ನೀಡದಂತೆ ಆಗ್ರಹಿಸಿ  ಜೈನಾಪುರ ಮತ್ತು ತೋರಣಹಳ್ಳಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು. 

ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮವೂ ಶ್ರೀ ಹನುಮಾನ ದೇವಸ್ಥಾನವಿರುವ ಸುಕ್ಷೇತ್ರವಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಸಾವಿರಾರು ಭಕ್ತರು ಪ್ರತಿ ಶನಿವಾರ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅದೇ ರೀತಿ ತೋರಣಹಳ್ಳಿಯಲ್ಲಿ ನಿರಂತರವಾಗಿ ರಾಜ್ಯ ಮತ್ತು ಜಿಲ್ಲೆಯ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಇಂತಹ ಸುಕ್ಷೇತ್ರವಾದ ತೋರಣಹಳ್ಳಿ ಗ್ರಾಮದ ಅರ್ಜುನ ಪಾಟೀಲ ಅವರ ಜಮೀನಿನ ಸರ್ವೇ ನಂಬರ್‌ 21/2 ರಲ್ಲಿ ವೈನ್‌ಶಾಪ್‌ ಪ್ರಾರಂಭಿಸುವುದರಿಂದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗುತ್ತದೆ ಎಂದು ತಿಳಿಸಿದರು.  

ಜತೆಗೆ ತೋರಣಹಳ್ಳಿ ಗ್ರಾಮದ ಒಣ ಬೇಸಾಯ ಪದ್ಧತಿಯನ್ನೇ ಅಳವಡಿಸಿಕೊಂಡಿರುವ ಬಡಕುಟುಂಬಗಳ ಊರಾಗಿದೆ. ಪರಿಶಿಷ್ಟ ಜಾತಿ ಜನಾಂಗದ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅವರ ತುಂಡು ಜಮೀನು ಕೂಡ ವೈನ್‌ಶಾಪ್‌ ಮಾಡುತ್ತಿರುವ ಸ್ಥಳದ ಸಮೀಪದಲ್ಲಿದೆ. ಪರಿಶಿಷ್ಟ ಜಾತಿಗೆ ಸೇರಿದವರ ಮನೆಗಳು ಕೂಡ ಇವೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿಯ ತುಂಡು ಭೂಮಿಯಲ್ಲಿ ಮನೆಗಳ ನಿರ್ಮಾಣ ಮಾಡಲಿದ್ದಾರೆ. ಹಾಗಾಗಿ ಈ ಜಮೀನಿನ ಪಕ್ಕದಲ್ಲಿರುವ ಜಮೀನಿನಲ್ಲಿ ವೈನ್‌ಶಾಪ್‌ ಪ್ರಾರಂಭಿಸುತ್ತಿರುವುದು ಪರಿಶಿಷ್ಟ ಜಾತಿಯ ಏಳಿಗೆಗೆ ಪೆಟ್ಟು ಬಿಳಲಿದೆ. ಹಾಗಾಗಿ ಸುಕ್ಷೇತ್ರವಾದ ತೋರಣಹಳ್ಳಿ ಗ್ರಾಮದಲ್ಲಿ ವೈನ್‌ಶಾಪ್‌ ಪ್ರಾರಂಭಿಸುವುದರಿಂದ ಧಾರ್ಮಿಕ, ಆರ್ಥಿಕವಾಗಿ ನಷ್ಟವಾಗಲಿದೆ. ಆದ್ದರಿಂದ ಮಾನ್ಯರಾದ ತಾವು ವೈನ್‌ ಶಾಪ್‌ ಪರವಾನಿಗೆ ನೀಡದಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಪರಿಶೀಲಿಸಿ, ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ರುದ್ರಪ್ಪಾ ಸಂಗಪ್ಪಗೋಳ, ಅಶೋಕ ಮಜಲಟ್ಟಿ, ಬಸವರಾಜ ಮಾಳಗೆ, ಕೃಷ್ಣಪ್ಪ ಜೋಗೆ, ಮಲ್ಲಗೌಡ ಪಾಟೀಲ, ಬಸವರಾಜ ಸಣ್ಣಲಚ್ಚಪ್ಪಗೋಳ, ಏಕನಾಥ ಖಾಡ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button