ಪ್ರಗತಿವಾಹಿನಿ ಸುದ್ದಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರಪ್ರದೇಶದ ಕಾಶಿ ಜ್ಞಾನ ಪೀಠದಲ್ಲಿರುವ ಶತಮಾನ ಕಂಡಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಸರ‍್ಯ ಪೀಠದ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ರೂಪಿಸಿರುವ ನೀಲನಕ್ಷೆಯಂತೆ ವ್ಯಾಪಕ ಅಧ್ಯಯನದ ಅವಕಾಶಗಳು ಈಗ ಲಭ್ಯವಾಗಿವೆ. ಕಾಶಿ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲವು ವೀರಶೈವ ಮಠ-ಪೀಠಗಳಿಗೆ ವಿವಿಧ ಮಠಾಧೀಶರನ್ನು, ಜಗದ್ಗುರುಗಳನ್ನು ಹಾಗೂ ಖ್ಯಾತ ವಿದ್ವಾಂಸರನ್ನು ನಾಡಿಗೆ ನೀಡಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಗುರುಕುಲದ ಶತಮಾನೋತ್ಸವವನ್ನು ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಗುರುಕುಲದಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಜೊತೆಗೆ ಭಾರತೀಯ ಪ್ರಾಚೀನ ಶಾಸ್ತ್ರಗಳಾದ ನ್ಯಾಯ, ವ್ಯಾಕರಣ, ವೇದಾಂತ, ಸಾಹಿತ್ಯ ಮೊದಲಾದ ವಿಷಯಗಳನ್ನು ತಜ್ಞ ವಿದ್ವಾಂಸರು ಬೋಧಿಸುವರು. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ-ಅಧ್ಯಾಪನಕ್ಕೆ ನಿಗದಿ ಪಡಿಸಲಾದ ಪಠ್ಯ ಪುಸ್ತಕಗಳ ಕುರಿತು ಗುರುಕುಲದಲ್ಲಿಯೇ ಪೂರಕ ಚಿಂತನೆ ನಡೆಯಲಿದೆ.
ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿರುವ ವೀರಶೈವ ಧರ್ಮದ ವಿಭಿನ್ನ ಮಠಗಳ ಮರಿದೇವರು, ಉತ್ತರಾಧಿಕಾರಿಗಳು ವಟುಗಳು ಮತ್ತು ವಿದ್ಯಾರ್ಥಿಗಳು ಗುರುಕುಲ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 8ನೇ ತರಗತಿ ಅಥವಾ 10 ನೇ ತರಗತಿಗಳಲ್ಲಿ ಸಂಸ್ಕೃತ ವಿಷಯವನ್ನು ತೆಗೆದುಕೊಂಡು ಉತ್ತೀರ್ಣರಾದವರು ಅಥವಾ ಕರ್ನಾಟಕದ ಸಂಸ್ಕೃತ ಪರೀಕ್ಷೆಗಳಲ್ಲಿ ಪ್ರಥಮ ಇಲ್ಲವೆ ಕಾವ್ಯ ಪರೀಕ್ಷೆಗಳನ್ನು ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯಲ್ಲಿ ಪೂರ್ಣ ಹೆಸರು, ಅಂಚೆ ವಿಳಾಸ, ವೈಯಕ್ತಿಕ ವಿವರಗಳು, ದೂರವಾಣಿ ಸಂಖ್ಯೆಗಳನ್ನು ನಮೂದಿಸಬೇಕು. ಅರ್ಜಿಯ ಜೊತೆಗೆ ಪೂರ್ವಾಧ್ಯಯನದ ಪ್ರಮಾಣ ಪತ್ರ ಮತ್ತು ಆಧಾರ ಕಾರ್ಡ್ಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ದಿ. 25-06-2024 ರೊಳಗಾಗಿ ‘ಶ್ರೀಶೈಲ ಶಾಸ್ತ್ರಿಗಳು, ಪ್ರಾಚಾರ್ಯರು, ಶ್ರೀ ಸಿದ್ದಲಿಂಗ ಶಿವಾಚಾರ್ಯ ವೇದಾಗಮ ಸಂಸ್ಕೃತ ಪಾಠಶಾಲೆ, ಶ್ರೀಕ್ಷೇತ್ರ ಯಡೂರು – 591213 ತಾ. ಚಿಕ್ಕೋಡಿ, ಜಿ. ಬೆಳಗಾವಿ. (ಮೊ) 9008967789’ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರು ದಿ. 2-7-2024 ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಯಡೂರ ಕ್ಷೇತ್ರದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವಂತೆ ಕಾಶಿ ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ