ನೀಟ್, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳಿಗೆ ಕೆಎಲ್ಇಯಿಂದ ಸೂಕ್ತ ತರಬೇತಿ – ಮಹಾಂತೇಶ ಕವಟಗಿಮಠ
ನೀಟ್, ಜೆಇಇ ಪರೀಕ್ಷೆಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಗೈದಿದ್ದಾರೆ : ಮಹಾಂತೇಶ ಕವಟಗಿಮಠ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನೀಟ್, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳಿಗೆ ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತವಾದ ತರಬೇತಿಯನ್ನು ನೀಡುವಲ್ಲಿ ಕೆಎಲ್‌ಇ ಸಂಸ್ಥೆಯು ಅಹರ್ನಿಶಿಯಾಗಿ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗು ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಹೇಳಿದರು.
ಅವರು ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮೊನ್ನೆ ಪ್ರಕಟಗೊಂಡ ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ಕೆಎಲ್‌ಇ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ರುಚಾ ಪಾವಸೆ ೭೨೦ಕ್ಕೆ ೭೧೫ ಅಂಕಗಳನ್ನು ಗಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ೪ ನೇ ಸ್ಥಾನವನ್ನು ಪಡೆದುಕೊಂಡು ಅದ್ವಿತೀಯ ಸಾಧನೆಯನ್ನು ಗೈದಿದ್ದಾಳೆ. ಅಂತೆಯೇ ಶ್ವೇತಾ ಸಾಂಬ್ರೇಕರ್ ೬೯೫ ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ೧೯೬ನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಮಾತ್ರವಲ್ಲದೆ ಕೆ.ಎಲ್.ಇ. ಸಂಸ್ಥೆಯ ವಿವಿಧ ಮಹಾವಿದ್ಯಾಲಯಗಳಿಂದ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ೪೦೦ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ವೈದ್ಯಕೀಯ ಕೋರ್ಸಿನ ಸೀಟುಗಳನ್ನು ಪಡೆದುಕೊಂಡಿರುವುದು ಸಂಸ್ಥೆಗೆ ಹೆಮ್ಮೆಯನ್ನುಂಟುಮಾಡಿದೆ.
ಇಂದು ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳು ಕರ್ನಾಟಕದತ್ತ ನೋಡುವಂತಾಗಿದೆ. ನೀಟ್ ಪರೀಕ್ಷೆಯಲ್ಲಿ ಟಾಪ್ ಐದು ರಾಜ್ಯಗಳಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ವೈದ್ಯಕೀಯ ಸೀಟುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನೀಟ್ ಪರೀಕ್ಷೆಯ ಆರಂಭದ ವರ್ಷಗಳಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಸೂಕ್ತವಾದ ತರಬೇತಿ ಹೊಂದದೆ ರ‍್ಯಾಂಕ್‌ಗಳನ್ನು ಗಳಿಸುವುದು ದುಸ್ತರವಾಗಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ ಕರ್ನಾಟಕದಲ್ಲಿ ಅನೇಕ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಕೆಎಲ್‌ಇ ಸಂಸ್ಥೆಯು ಕೂಡ ನೀಟ್, ಜೆಇಇ ಹಾಗೂ ಸಿಇಟಿಗೆ ಸೂಕ್ತವಾದ ತರಬೇತಿಗಳನ್ನು ನೀಡುತ್ತಿದೆ. ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳು ದೂರದ ಮಂಗಳೂರು, ಬೆಂಗಳೂರುಗಳಿಗೆ ಹೋಗಿ ಸಾಕಷ್ಟು ಹಣವನ್ನು ವೆಚ್ಚಮಾಡಿ ತರಬೇತಿಯನ್ನು ಪಡೆಯಬೇಕಾಗಿತ್ತು.
ಇಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿ ಹಾಗೂ ದೂರದೃಷ್ಟಿ ಮತ್ತು ಆಡಳಿತ ಮಂಡಳಿಯ ಸರ್ವಸದಸ್ಯರ ಪ್ರಯತ್ನದ ಪ್ರತಿಫಲವಾಗಿ ರೈತರ ಮಕ್ಕಳೂ ವೈದ್ಯಕೀಯ ಹಾಗೂ ಇಂಜನೀಯರಿಂಗ್ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯುವಂತಾಗಿದೆ. ಕೆಎಲ್‌ಇ ಸಂಸ್ಥೆಯು ಗ್ರಾಮೀಣ ಪ್ರದೇಶಗಳನ್ನು ಮೊದಲ್ಗೊಂಡು ಉತ್ತರ ಕರ್ನಾಟಕದಲ್ಲಿ ತರಬೇತಿ ಕೇಂದ್ರಗಳನ್ನು ಹುಟ್ಟುಹಾಕಿದೆ. ನುರಿತ ಶಿಕ್ಷಕರನ್ನು ನೇಮಿಸಿದೆ. ಪಠ್ಯಕ್ಕೆ ಸಂಬಂಧಿಸಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಹಾಗಾಗಿ ಬಹುಸಂಖ್ಯೆಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜನೀಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್‌ಗಳನ್ನು ಪಡೆಯುತ್ತಿದ್ದಾರೆ.
ಅಂತೆಯೇ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿದರೆ ನೀಟ್ ಪರೀಕ್ಷೆಯಲ್ಲಿ ಸುಲಭವಾಗಿ ಅರ್ಹತೆಗೊಳ್ಳುವದರಲ್ಲಿ ಯಾವ ಆತಂಕವೂ ಇಲ್ಲ. ಪಾಲಕರು ಕೂಡ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಅನುಕೂಲಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸಬೇಕು. ಕೆಎಲ್‌ಇ ಸಂಸ್ಥೆಯು ಗ್ರಾಮೀಣ ಭಾಗದ ಹಾಗೂ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ನೀಟ್, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಬಹುಸಂಖ್ಯೆಯಲ್ಲಿ ವಿಸ್ತರಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಜಂಟಿ ನಿರ್ದೇಶಕರಾದ ಡಾ.ಸುನೀಲ ಜಲಾಲಪುರೆ, ಆಜೀವ ಸದಸ್ಯರಾದ ಶೀತಲ್ ನಂಜಪ್ಪನವರ, ಡಾ.ಸತೀಶ ಎಮ್.ಪಿ. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
https://pragati.taskdun.com/latest/prof-sunil-jalalapurentte-awarddharmendra-pradhan/
https://pragati.taskdun.com/politics/cm-basavaraj-bommaibjp-janotsava-samaveshadoddaballapura/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ