ಲೇಖನ: ಜಯಶ್ರೀ ಜೆ. ಅಬ್ಬಿಗೇರಿ ಬೆಳಗಾವಿ
ನಾವೆಲ್ಲ ಸಣ್ಣವರಿರುವಾಗ ಶಾಲೆಗೆ ಸೂಟಿ ಬಿಟ್ಟ ದಿನವೇ ಇದ್ದೆರಡು ಬಟ್ಟೆಗಳನ್ನು ಕಸೂತಿ ಹಾಕಿದ ಕೈಚೀಲದಲ್ಲಿ ತುರುಕಿಕೊಂಡು ನಮ್ಮವ್ವನ ಜೊತೆ ಅಜ್ಜ ಅಮ್ಮನ ಮನೆಗೆ ಬೇಸಿಗೆ ಸೂಟಿ ಕಳೆಯುವ ನೆಪದೊಳಗೆ ಎರಡು ತಿಂಗಳುಗಟ್ಟಲೆ ಬಿಡಾರ ಹೂಡಲು ಹೊರಟು ನಿಲ್ಲುತ್ತಿದ್ದೆವು. ಅಜ್ಜ ಅಮ್ಮಂದಿರು ತಿಂಗಳು ಮೊದಲೇ ಪತ್ರ ಬರೆದು ನಮ್ಮ ಆಗಮನಕ್ಕಾಗಿ ಕಾಯುತ್ತಿದ್ದರು. ಊರಿಗೆ ಬರೋ ಒಂದು ಬಸ್ಸಿಗೆ ಮಾವನನ್ನು ಅರ್ಧ ಗಂಟೆ ಮೊದಲೇ ಕಾಯಲು ಅಮ್ಮ ಸೂಚಿಸಿರುತ್ತಿದ್ದಳು. ಬಸ್ ಇಳಿಯುತ್ತಲೇ ಮಾವ ನಮ್ಮ ಕೈಯಲ್ಲಿನ ಚೀಲಗಳನ್ನು ತನ್ನ ಕೈಗೆ ವರ್ಗಾಯಿಸಿಕೊಂಡು ಮಳೆ ಬೆಳೆ ಬಗ್ಗೆ ವಿಚಾರಿಸುತ್ತ ತಮ್ಮ ಊರಿಗೆ ಸ್ವಾಗತಿಸುತ್ತಿದ್ದ. ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳೂ ಹಾಜರಾಗಿ ಅವರೊಂದಿಗೆ ಮಾವನ ಮಕ್ಕಳೂ ಸೇರಿ ಓಣಿಯಲ್ಲೆಲ್ಲ ದಾಂಗುಡಿಗೆ ಶುರು ಹಚ್ಚಿಕೊಳ್ಳುತ್ತಿದ್ದೆವು.
ತವರಿಗೆ ಬಂದ ಹೆಣ್ಣುಮಕ್ಕಳ, ಮೊಮ್ಮಕ್ಕಳ ರಾಜೋಪಚಾರದಲ್ಲಿ ಅಮ್ಮನಿಗೆ ದಣಿವೇ ಆಗುತ್ತಿರಲಿಲ್ಲ. ಅಜ್ಜ ಛಾವಣಿಯಲ್ಲಿ ಕೂತು ಹೋಗೋ ಬರೋವರಿಗೆಲ್ಲ ಚಹಾ ಚೂಡಾ ತಿನಿಸುತ್ತ ಮೊಮ್ಮಕ್ಕಳ ಸಡಗರ ಹೇಳಿ ಸಂಭ್ರಮಿಸುತ್ತಿದ್ದ. ಆಡಿ ದಣಿದ ಬಾಯಿ ತಂಪಾಗಿಸಲು ಬರ್ಫಿಗೆ ನಾಲ್ಕಾಣೆ ಎಂಟಾಣೆ ಒಳಂಗಿ ಕಿಸೆಯಿಂದ ತೆಗೆದು ಎಣಿಸಿ ಕೊಡುತ್ತಿದ್ದ.
ಒಣಗಿದ ಕೆರೆಯಂಗಳ ಹಸಿಯಿಲ್ಲದ ಬಾವಿಕಟ್ಟೆ ಗ್ರಾಮ ದೇವಿ ಗುಡಿಯ ದೊಡ್ಡ ಆಲದ ಮರ ನಮ್ಮ ಲಗೋರಿ ಚಿನ್ನಿದಾಂಡು ಕುಂಟಿಬಿಲ್ಲೆ ಮರಕೋತಿಯಾಟ ಮುಟ್ಟಾಟ ಕಣ್ಣುಮುಚ್ಚಾಲೆಗಳಿಗೆ ಮೈ ಚಾಚಿ ಸಹಕರಿಸುತ್ತಿದ್ದವು.ಆಲದ ಮರದ ಟೊಂಗೆ ಹಿಡಿದು ಜೀಕುವದರ ಮಜ ಅನುಭವಿಸಿ, ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಹುಣಸೆ ಗಿಡ,ಮಾವಿನ ಗಿಡಕ್ಕೆ ಗುರಿಯಿಟ್ಟು ಕಲ್ಲು ಹೊಡೆದು ಅವುಗಳಿಗೆ ಗಾಯ ಮಾಡಿ ಹುಳಿಯಾದ ಹುಣಸೆ ಮಾವುಗಳನ್ನು ಬಾಳ ಹುಳಿ ಐತಿ ಎನ್ನತ್ತ ಖರ ಖರ ತಿಂದು ಗಂಟಲಿಗೆ ನೀರಿಳಿಸಲು ಬೆನ್ನಿಗೆ ಕಾಲು ಅಂಟಿಸಿಕೊAಡು ಮನೆಯತ್ತ ಮುಖ ಮಾಡುತ್ತಿದ್ದೆವು.
ಛಾವಣಿಯಲ್ಲಿ ಶ್ಯಾವಿಗೆ ಸಂಡಿಗೆ ಹಪ್ಪಳ ಉಪ್ಪಿನಕಾಯಿ ಮಾಡುವದರಲ್ಲಿ ತಲ್ಲೀನರಾಗಿರುತ್ತಿದ್ದ ಅವ್ವ, ಅವ್ವನ ಅಕ್ಕ ತಂಗಿಯರಿಂದ ಬೈಗುಳ ತಿನ್ನುತ್ತ ಅಡುಗೆ ಮನೆಯ ಮೂಲೆಯಲ್ಲಿ ಬಿಳಿ ಅರವಿ ಸುತ್ತಿಕೊಂಡು ತಣ್ಣಗೆ ಕುಳಿತಿರುವ ಹರವಿಗೆ ಭಾರವಾದ ಹಿತ್ತಾಳೆಯ ಚೊಂಬನ್ನು ಮುಳುಗಿಸಿ ನಾ ಮುಂದು ತಾ ಮುಂದು ಎಂದು ನೀರು ಕುಡಿಯುತ್ತ ಒಬ್ಬರಿಗೊಬ್ಬರು ಕಾಲೆಳೆದು ಮುಸಿ ಮುಸಿ ನಗುತ್ತ ಕುಡಿದ ನೀರನ್ನು ಮೂಗಿಂದ ಹೊರಗೆ ಹರಿಸುವದನ್ನು ಕಂಡ ಅಮ್ಮ ಬರೇ ನೀರು ಕುಡದು ಹೊಟ್ಟೆ ತುಂಬಿಸ್ಕೊಬ್ಯಾಡ್ರಿ ನಿಮಗಂತ ನುಚ್ಚು ಮಜ್ಜಗಿ ಮಾಡೆನಿ ಹೊಟ್ಟಿತುಂಬ ತಿನ್ರಿ. ಸಂಜೀಕ ನಿಮ್ಮವ್ವಗೊಳು ಮಾಡಿದ ಶ್ಯಾವಿಗೆ ಬಸದು ಹಪ್ಪಳ ಸೆಂಡಿಗಿ ಕರದು ಕೊಡ್ತೆನಿ ಎಂದು ಗಲ್ಲ ಹಿಡಿದು ಹೇಳುತ್ತಿದ್ದಳು. ಕಂಠಪೂರ್ತಿ ನುಚ್ಚು ಮಜ್ಜಗಿ ಹೊಡದು ಆಗ ತಾನೆ ಹಾಕಿದ ಬಿಸಿ ಬಿಸಿ ಉಪ್ಪಿನ ಕಾಯಿಯನ್ನು ಅಂಗೈ ಮೇಲಿಟ್ಟುಕೊಂಡು ನಾಲಿಗೆಯಿಂದ ಟಕ್ ಟಕ್ ಅಂತ ಸದ್ದು ಮಾಡುತ್ತ ಮತ್ತೆ ಅಂಗಳಕ್ಕೆ ಜಿಗಿಯುತ್ತಿದ್ದೆವು.
ತುಂಟಾಟ ಹುಡುಗಾಟ ಚೆಲ್ಲಾಟಗಳಲ್ಲಿ ಸೂಟಿ ಕಳೆದಿದ್ದೆ ಗೊತ್ತಾಗುತ್ತಿರಲಿಲ್ಲ ಭರ್ತಿ ಎರಡು ತಿಂಗಳು ಮೋಜು ಮಾಡಿದ ನಮಗೆ ಮರಳಿ ಶಾಲೆಗೆ ಹೋಗುವದೆಂದರೆ ಮೈಮೇಲೆ ಮುಳ್ಳು ಬರುತ್ತಿತ್ತು. ಶಾಲೆ ಶುರುವಾಗೋ ಹಿಂದಿನ ದಿನ ಜೊಲು ಹಾಕಿದ ಮೋರೆಯೊಂದಿಗೆ ಮರುಪ್ರಯಾಣ ಅವ್ವಗ ಸೀರಿ ನಮಗೆಲ್ಲ ಹೊಸ ಅಂಗಿ ಗ್ಯಾರಂಟಿ ಸಿಗುತ್ತಿದ್ದವು. ಮನೆ ಮಂದಿ ಜೊತೆಗೆ ಪಕ್ಕದ ಮನೆಯವರು ಬಸ್ ನಿಲ್ದಾಣಕ್ಕೆ ಬಂದು ನಮ್ಮನ್ನು ಬೀಳ್ಕೊಡುವಾಗ ಎಲ್ಲರ ಕಣ್ಣಂಚುಗಳು ಒದ್ದೆಯಾಗಿರುತ್ತಿದ್ದವು. ಮತ್ತ ಮುಂದಿನ ಸೂಟಿಗೆ ತಪ್ಪದ ರ‍್ರಿ ಅಂತ ಸಾಂಘಿಕವಾಗಿ ಬಸ್ ಬರೋವರೆಗೂ ಹೇಳುತ್ತಿದ್ದರು.
ಟಿವಿ ಕಂಪ್ಯೂಟರ್ ಮೊಬೈಲು ವಿಡಿಯೋ ಗೇಮಿನೊಳಗ ಮುಖ ಹುದುಗಿಸಿ, ಸೂಟಿಯೊಳಗಿನ ಹೊಂ ವರ್ಕ್ ಮಾಡುತ್ತ ಬೇಸಿಗೆ ಶಿಬಿರದಲ್ಲಿ ರಜೆ ಕಳೆಯುವ ಮಕ್ಕಳನ್ನು ಕಂಡು ನಮ್ಮಂತೆ ಸ್ವಚ್ಛಂದವಾಗಿ ಮಧುರ ಬಾಲ್ಯ ಕಳೆಯುವ ಸೌಭಾಗ್ಯ ಈ ಮಕ್ಕಳಿಗಿಲ್ಲವಲ್ಲ ಅಂತ ಕರಳು ಚರ‍್ರ ಅಂತು ನಮ್ಮ ಬಾಲ್ಯ ನೆನಪಾತು.
ಕಾಲ ಬದಲಾದಂಗ ನಾವೂ ಬದಲಾಗಬೇಕು ಅಂತಿರೇನು? ಕಾಲದ ಜೊತೆ ಕಾಲು ಹಾಕುತ್ತ ಮಕ್ಕಳನ್ನು ಬಂಧು ಬಾಂದವರ ಜೊತೆ ಕಾಲ ಕಳೆಯಲು ಅವಕಾಶ ಮಾಡಿಕೊಡಿ. ಹೊರಗೆ ಆಡಲು ಬಿಡಿ. ಕುಟುಂಬದವರೆಲ್ಲ ಕೂಡಿ ಪ್ರವಾಸಕ್ಕೆ ಹೋಗಿ. ಪಾರ್ಕ್ ಗುಡಿ ಗುಂಡಾರಕ್ಕೆ ಭೇಟಿ ಕೊಡಿ. ಅವರಿಗನ್ನಿಸಿದ್ದನ್ನು ಮುಕ್ತವಾಗಿ ಹೇಳಲು ಬಿಡಿ.ಕತೆ ಕವಿತೆ ಓದೋ ಬರೆಯೋ ಚಟ ಅವರಿಗೂ ಅಂಟಿಸಿ. ಚಾಟ್ ಜಂಕ್ ಫುಡ್ ಬಿಡಿಸಿ, ಮನೆಯ ಸವಿರುಚಿ ತೋರಿಸಿ. ಸಂತೆ ಬ್ಯಾಂಕಿಗೆ ಅವರೂ ನಿಮ್ಮೊಂದಿಗೆ ಕಾಲು ಹಾಕಲಿ. ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಲಿ.
ಮುಗ್ಧ ಮನಸ್ಸಿನ ಮುದ್ದು ಮಕ್ಕಳು ಮಧುರ ಬಾಲ್ಯದಲ್ಲಿ ರಜೆಯನ್ನು ಸಜೆಯಾಗಿಸಿಕೊಳ್ಳದೆ ನಮ್ಮಂತೆ ಮಜವಾಗಿ ಕಳೆಯಲು ಅನು ಮಾಡಿಕೊಡೋಣ ಹೂಂ ಅಂತಿರಿ ತಾನೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ