ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಭೇಟಿ ನೀಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ್ ಜನ್ಯಾ, ಕರ್ನಾಟಕದಲ್ಲಿ ಸಾಕಷ್ಟು ನದಿಗಳು ಎಲ್ಲರ ಬದುಕಿಗೆ ಆದಾರ ಸ್ಥಂಭವಾಗಿದೆ. ಕನ್ನಡದ ಜೀವ ನದಿ ಕಾವೇರಿ ಬಗ್ಗೆ ಅನೇಕ ಗೀತೆಗಳನ್ನು ಚಲನಚಿತ್ರಗಳಲ್ಲಿ ಬಳಸಿದ್ದೇವೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಆದೇಶ ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂದಗಂಗಾ, ವೇದಗಂಗಾ ಸೇರಿದಂತೆ ಅನೇಕ ನದಿಗಳು ಹರಿಯುತ್ತಿರುವುದು ನಾವು ನೋಡುತ್ತಿದ್ದೇವೆ ಎಂದರು.
ಚಲನಚಿತ್ರ ಗೀತೆಗಳಲ್ಲಿ ನದಿಗಳ ಕುರಿತಾಗಿಯೇ ಗೀತೆಗಳನ್ನು ರಚಿಸಲು ನಾನು ಕೂಡ ಗೀತರಚನೆಕಾರರಲ್ಲಿ ವಿನಂತಿ ಮಾಡುತ್ತೇನೆ. ಶ್ರೀಗಳ ಆದೇಶದಂತೆ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹರಿಯುವ ನದಿಗಳ ಕುರಿತಾಗಿಯೇ ಗೀತೆಗಳನ್ನು ರಚಿಸುತ್ತೇವೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನದಿಗಳ ಬಗ್ಗೆ ನಾವು ಹೆಚ್ಚು ಗೌರವ ತಾಳುವ ಅವಶ್ಯಕತೆ ಇದೆ. ನದಿಗಳು ಉಳಿದರೆ ನಾವು ಉಳಿಯುತ್ತೇವೆ. ಇವತ್ತು ನಾವೆಲ್ಲರೂ ಹೆಮ್ಮೆ ಪಡಬೇಕು. ಕರ್ನಾಟಕ ಸರಕಾರ ಮೈಸೂರಿನ ಬೃಂದಾವನದ ಮಾದರಿಯಲ್ಲಿ ಹಿಡಕಲ್ ಡ್ಯಾಂ ನಲ್ಲಿಯೂ ಬೃಂದಾವನ ನಿರ್ಮಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನದಿಗಳು ಹರಿಯುತ್ತವೆ ಅವುಗಳ ಬಗ್ಗೆ ನಾವೆಲ್ಲ ಹೆಚ್ಚು ಜನರಿಗೆ ಶೃದ್ದೆಯನ್ನು ಮೂಡಿಸುವ ಅವಶ್ಯಕತೆ ಇದೆ. ಚಲನಚಿತ್ರಗಳು ಹೆಚ್ಚು ಜನ ನೋಡುವ ಭಾಗ ಎಂದರೆ ಉತ್ತರ ಕರ್ನಾಟಕ. ಆದ್ದರಿಂದ ಅರ್ಜುನ್ ಜನ್ಯಾ ಅವರು ಈ ದೃಷ್ಟಿಯಿಂದ ಕಾರ್ಯಪ್ರವೃತ್ತರಾಗಬೇಕು. ನಾವು ಕೂಡ ಚಲನಚಿತ್ರ ಗೀತ ರಚನೆಕಾರರಾದ ನಾಗೇಂದ್ರ ಪ್ರಸಾದ, ಹಂಸಲೇಖ ಅವರಿಗೆ ಕೇಳಿಕೊಳ್ಳುತ್ತೇವೆ ಎಂದು ಶ್ರೀಗಳು ತಿಳಿಸಿದರು.
ಮೈಸೂರಿನ ಮಾಯಾಕಾರ ಗುರುಕುಲದ ಮುಖ್ಯಸ್ಥ ಡಾ. ಮೂಗೂರು ಮಧುಧೀಕ್ಷಿತ ಮಾತನಾಡಿ, ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಸಾಕಷ್ಟು ಪ್ರಯತ್ನ ಪಡುತ್ತ ಈ ಭಾಗದಲ್ಲಿ ಕನ್ನಡದ ಉಳಿವಿಗಾಗಿ ನೆಲ,ಜಲ ಮತ್ತು ಸಂಸ್ಕೃತಿ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಇಂದು ಅರ್ಜುನ್ ಜನ್ಯಾ ಅವರು ಶ್ರೀಗಳ ಆಶೀರ್ವಾದ ಪಡೆದಿರುವುದು ಸಂತಸ ತಂದಿದೆ ಎಂದರು.
ನಟ ಸುದೀರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಶಿವಾನಂದ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ