ಪ್ರಗತಿವಾಹಿನಿ ಸುದ್ದಿ; ಹಾಸನ: ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಒಂಟಿಸಲಗದ ದಾಳಿಗೆ ದಸರಾ ಆನೆ ಅರ್ಜುನ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಭಾಗದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದರು. ಸಾಕಾನೆ ಅರ್ಜುನ ನೇತೃತ್ವದಲ್ಲಿ ನಾಲ್ಕು ಸಾಕಾನೆಗಳ ಹಿಂದು ಬಳಸಿ ಕಾಡಾನೆಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ವೇಳೆ ಕಾಡಾನೆ ಹಾಗೂ ಸಾಕಾನೆಗಳ ನಡುವೆ ಕಾಳಗ ಶುರುವಾಗಿದೆ.
ಆನೆಗಳ ಕಾಳಗ ಆರಂಭವಾಗುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿಹೋಗಿವೆ. ಅರ್ಜುನ ಆನೆಯ ಮೇಲೆ ಕುಳಿತಿದ್ದ ಮಾವುತರು ಕೆಳಗಿಳಿದು ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಒಂಟಿಸಲಗವೊಂದು ಭೀಕರವಾಗಿ ದಾಳಿ ನಡೆಸಿದ್ದು, ದಾಳಿಗೆ ಗಂಭೀರವಾಗಿ ಗಾಯಗೊಂಡ ಸಾಕಾನೆ ಅರ್ಜುನ ಮೃತಪಟ್ಟಿದೆ.
2019ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆಗಳ ವಿರುದ್ಧ ಹೋರಾಟ ನಡೆಸಿ ಕೊನೆಯುಸಿರೆಳೆದಿದೆ. 22 ವರ್ಷಗಳ ಕಾಲ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿತ್ತು. ಕೆಲ ವರ್ಷಗಳಿಂದ ಜಂಬೂಸವಾರಿಯಲ್ಲಿ ನಿಶಾನೆಯಾಗಿಯೂ ಪಾಲ್ಗೊಳ್ಳುತ್ತಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಸೀಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ