ಪ್ರಗತಿವಾಹಿನಿ ಸುದ್ದಿ, ಮುಂಬೈ – ಖ್ಯಾತ ಪತ್ರಕರ್ತ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಬಂಧನಕ್ಕೆ ಟಿಆರ್ ಪಿ ಹಗರಣ ಕಾರಣವಲ್ಲ ಎನ್ನುವುದನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ.
2ಂ18ರಲ್ಲಿ ನಡೆದ ಇಂಟಿರಿಯರ್ ಡಿಸೈನರ್ ಮತ್ತು ಆತನ ತಾಯಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅರ್ನಬ್ ಬಂಧನವಾಗಿದೆ.
ಅರ್ನಬ್ ಮತ್ತು ಕೆಲವರು ನನಗೆ 5 ಕೋಟಿ ರೂ. ಹಣ ನೀಡಬೇಕಾಗಿದೆ. ಆದರೆ ಅದನ್ನು ಅವರು ನೀಡದೆ ನನಗೆ ಸತಾಯಿಸುತ್ತಿದ್ದಾರೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಇಂಟಿರಿಟರ್ ಡಿಸೈನರ್ ಅನ್ವಯ್ ನಾಯಕ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಗನ ಸಾವಿನ ಸುದ್ದಿ ತಿಳಿದ ತಾಯಿ ಕುಮುದ್ ನಾಯಕ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರು. ಆದರೆ ಕಳೆದ ಮೇ ತಿಂಗಳಲ್ಲಿ ಅನ್ವಯ್ ನಾಯಕ್ ಮಗಳು ನೀಡಿದ ದೂರಿನ ಅನ್ವಯ (ಆಕೆಯಿಂದ ಒತ್ತಾಯಪೂರ್ವಕವಾಗಿ ದೂರು ಪಡೆಯಲಾಗಿದೆ ಎನ್ನುವ ಆರೋಪವಿದೆ) ಮತ್ತೆ ಪ್ರಕರಣಕ್ಕೆ ಮರುಜೀವ ನೀಡಿ ವಿಚಾರಣೆ ನಡೆಸಲಾಗುತ್ತಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಅರ್ನಬ್ ಗೋಸ್ವಾಮಿಯನ್ನು ಇಂದು ಮುಂಜಾನೆ ಬಂಧಿಸಲಾಗಿದೆ. ಆದರೆ ಬಂಧನಕ್ಕೆ ಅಗತ್ಯವಾದ ಯಾವುದೇ ನಿಯಮಾವಳಿ ಅನುಸರಿಸಿಲ್ಲ ಎಂದು ಆರೋಪಿಸಿರುವ ಅರ್ನಬ್ ಕುಟುಂಬ, ಮನೆಯವರೆಲ್ಲರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ.
ಟಿಆರ್ ಪಿ ವಿಷಯಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯಲ್ಲಿ ಮುಂಬೈ ಪೊಲೀಸರ ವಿರುದ್ಧ ಮತ್ತು ಮಹಾರಾಷ್ಟ್ರ ಪೊಲೀಸರ ವಿರುದ್ಧ ಸರಣಿ ವರದಿಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಅರ್ನಬ್ ಗೋಸ್ವಾಮಿ ವಿರುದ್ಧ ಸರಕಾರಿ ಪ್ರತೀಕಾರ ತೀರಿಸಿಕೊಳ್ಳಲು ಸತ್ತುಹೋಗಿದ್ದ ಪ್ರಕರಣಕ್ಕೆ ಮರುಜೀವ ನೀಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಪತ್ರಕರ್ತ ಅರ್ನಬ್ ಗೋಸ್ವಾಮಿ ಪೊಲೀಸ್ ವಶಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ