ಚೆಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷರಿಬ್ಬರು ಸೇರಿ ನಾಲ್ವರ ಬಂಧನ, ಬಿಡುಗಡೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷರಿಬ್ಬರು ಸೇರಿದಂತೆ ನಾಲ್ವರು ಸದಸ್ಯರನ್ನು ಉದ್ಯಮಬಾಗ್ ಠಾಣೆ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಮಾಜಿ ಅಧ್ಯಕ್ಷರಾದ ವೆಂಕಟೇಶ ಸರ್ನೋಬತ್, ಉಮೇಶ ಶರ್ಮಾ, ಸದಸ್ಯರಾದ ಅಶೋಕ ಕೋಳಿ ಹಾಗೂ ಅಶ್ಪಾಕ್ ತಹಸಿಲ್ದಾರ್ ಬಂಧಿತರು.
ಬೆಳಗಾವಿ ಮಟೀರಿಯಲ್ಸ್ ಟೆಸ್ಟಿಂಗ್ ಸೆಂಟರ್ ಜನರಲ್ ಬಾಡಿ ಮೀಟಿಂಗ್ ವೇಳೆ ಅಕ್ರಮವಾಗಿ ಪ್ರವೇಶಿಸಿ ಆಯುಧಗಳನ್ನು ತೋರಿಸಿ ಬೆದರಿಕೆ ಹಾಕಿದ್ದರೆನ್ನುವ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ಮಟೀರಿಯಲ್ಸ್ ಟೆಸ್ಟಿಂಗ್ ಸೆಂಟರ್ ಕಾರ್ಯದರ್ಶಿಯೂ, ಚೆಂಬರ್ ಆಫ್ ಕಾಮರ್ಸ್ ಹಾಲಿ ಅಧ್ಯಕ್ಷರೂ ಆಗಿರುವ ಶ್ರೀಧರ ಉಪ್ಪಿನ್ ದೂರು ನೀಡಿದ್ದರು. ಶುಕ್ರವಾರ ಸಂಜೆ ಬಿಎಂಟಿಸಿ ಸರ್ವಸಾಧಾರಣ ಸಭೆ ನಡೆದಿತ್ತು. ಅಲ್ಲಿಗೆ ಈ ನಾಲ್ವರೂ ಅಕ್ರಮವಾಗಿ ಪ್ರವೇಶಿಸಿದ್ದರು. ಕೈಯಲ್ಲಿ ಆಯುಧಗಳನ್ನು ಹಿಡಿದು ಬಂದು ಧಮಕಿ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿ ಈ ನಾಲ್ವರನ್ನೂ ಬಂಧಿಸಿ, ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಉದ್ಯಮಬಾಗ್ ಇನಸ್ಪೆಕ್ಟರ್ ಎಸ್.ಸಿ.ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ನಾನೇ ಅಧ್ಯಕ್ಷ, ವಿಚಾರಿಸಲು ಹೋಗಿದ್ದೆ
ತಮ್ಮ ಮೇಲೆ ಬಂದಿರುವ ಆರೋಪಗಳನ್ನು ನಿರಾಕರಿಸಿರುವ ವೆಂಕಟೇಶ ಸರ್ನೋಬತ್, ಬಿಎಂಟಿಸಿಗೆ ನಾನೇ ಅಧ್ಯಕ್ಷ. ಆದರೆ ನನಗೆ ತಿಳಿಸದೆ ಸರ್ವಸಾಧಾರಣ ಸಭೆ ಕರೆದಿದ್ದರು. ಗೊತ್ತಾಗಿ ವಿಚಾರಿಸಲು ಹೋಗಿದ್ದೆ. ಯಾವ ಆಯುಧವನ್ನೂ ಒಯ್ದಿರಲಿಲ್ಲ. ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಗತಿವಾಹಿನಿಗೆ ತಿಳಿಸಿದರು.
ಸಭೆಗೆ ಪೊಲೀಸರನ್ನೂ ಕರೆಸಲಾಗಿತ್ತು. ನಂತರ ಸೌಹಾರ್ದ ಮಾತುಕತೆಯೂ ನಡೆದಿತ್ತು. ಆದರೂ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾನೂನು ಪ್ರಕಾರ ಹೋರಾಡುತ್ತೇವೆ ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ