ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮಾರ್ಕೆಟ್ ಎಸಿಪಿ ಎನ್ ವಿ. ಬರಮನಿ ಹಾಗೂ ತಂಡ ಗೋವಾ ಸರಾಯಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ್ದು, ಖಾಸಗಿ ಬಸ್ ಸಮೇತ ರೂ. ೩೧,೩೦,೭೦೦ ಮೌಲ್ಯದ ಅಕ್ರಮ ಸರಾಯಿ ಜಪ್ತ ಮಾಡಿಕೊಳ್ಳಲಾಗಿದೆ.
ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ತ್ರಿವೇಣಿ ಹೊಟೇಲ್ ಸರ್ಕಲ್ ಹತ್ತಿರ ಕಾರ್ಯಾಚರಣೆ ನಡೆಸಲಾಯಿತು. ಗೋವಾ ರಾಜ್ಯದಿಂದ ಬೆಳಗಾವಿ ಮುಖಾಂತರ ಹೈದ್ರಾಬಾದ್ ಕಡೆಗೆ ಅಕ್ರಮ ಮದ್ಯ ಹಾಗೂ ಮಾದಕ ದ್ರವ್ಯವನ್ನು ಸಾಗಿಸಿ ಹೈದ್ರಾಬಾದ್ ನಗರದಲ್ಲಿ ಲೈಸನ್ಸ್ ರಹಿತವಾಗಿ ಮಾರಾಟ ಮಾಡುತ್ತಾರೆ ಎಂದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಯಿತು.
ಎನ್.ವ್ಹಿ.ಬರಮನಿ ಮತ್ತು ಅಧೀನ ಅಧಿಕಾರಿಗಳಾದ ಸಂಗಮೇಶ ಶಿವಯೋಗಿ ಪಿಐ ಮಾರ್ಕೇಟ್, ರಾಘವೇಂದ್ರ ಹವಾಲ್ದಾರ ಪಿಐ ಶಹಾಪೂರ, ಜಿ. ಎನ್. ಗಾವಜಿ ಪಿಎಸ್‌ಐ ಹಾಗೂ ಸಿಬ್ಬಂದಿ ಶಂಕರ ಪಾಟೀಲ, ಎ.ಬಿ. ನವೀನಕುಮಾರ, ಶ್ಯಾಮಸುಂದರ ಆರ್ ದೊಡ್ಡನಾಯ್ಕರ, ಅನೀಲ ರೇಂಜರಿ, ಬಸವರಾಜ ಖರೋಶಿ, ಮಹೇಶ ಕೌಜಲಗಿ, ಎಲ್. ಎಸ್ ಖಡೋಲ್ಕರ, ಎಮ್. ಎಸ್. ಚಾವಡಿ, ವಿ.ಬಿ. ಮಾಳಗಿ, ಆಶೀರ ಅಹಮದ ಜಮಾದಾರ, ಎಸ್. ಬಿ. ಖಾನಾಪೂರೆ ಕಾರ್ಯಾಚರಣೆಯಲ್ಲಿದ್ದರು.
ಖಾಸಗಿ ಬಸ್ ನಂ ಪಿ.ವಾಯ್-೦೪/ಎ ೨೪೬೭ ನೇದ್ದರಲ್ಲಿ ಬೆಳಗಾವಿ ಮುಖಾಂತರ ಹೈದ್ರಾಬಾದ್ ಕಡೆಗೆ ಅಕ್ರಮ ಮದ್ಯ ಹಾಗೂ ಮಾದಕ ದ್ರವ್ಯವನ್ನು ಹೈದ್ರಾಬಾದ ನಗರಕ್ಕೆ ಯಾವುದೇ ಲೈಸನ್ಸ/ಪರವಾನಿಗೆ ಇಲ್ಲದೇ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳಾದ] ಎಮ್ ಡಿ ಮೆಹಬೂಬ ತಂದೆ ಅಫ್ಸರ್ ಸಾ: ಪರಗಿ ಜಿ: ವಿಕರಾಬಾದ, ಹೈದ್ರಾಬಾದ್, [ ಬಸ್ ಚಾಲಕ], ಕೆ.ಭಾನು ಸುಧಾಕರ ತಂದೆ ಗೋವಿಂದರಾಜುಡು ಸಾ: ಕಾಕಿನಾಡು ಈಸ್ಟ್ ಗೋದಾವರಿ [ಕ್ಲೀನರ್] ವಶದಲ್ಲಿದ್ದ ರೂ.೧,೩೦,೭೦೦ ಮೌಲ್ಯದ ಸರಾಯಿ ತುಂಬಿದ ೧೦೬ ಬಾಟಲಿಗಳು ಒಟ್ಟು ೭೯ ಲೀಟರ ೫೦೦ ಮಿಲಿ ಹಾಗೂ ಬಸ್ ಪಿ.ವಾಯ್-೦೪/ಎ-೨೪೬೭ ಸುಮಾರು ರೂ.೩೦,೦೦೦೦೦ ಮೌಲ್ಯ ಹೀಗೆ ಒಟ್ಟು ೩೧,೩೦,೭೦೦/-ರೂ ಕಿಮ್ಮತ್ತಿನ ಮಾಲನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ