ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ಕ್ಯಾಂಪ್ ಚರ್ಚ್ ಸ್ಟ್ರೀಟ್ ನಲ್ಲಿ ಪ್ರವೀಣ ರಾನೋಜಿ ಜಾಧವ (೩೮ ವರ್ಷ) ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಗೋವಾ ರಾಜ್ಯದ ವಿವಿಧ ಕಂಪನಿಯ ಸಾರಾಯಿ ತುಂಬಿದ ಬಾಟಲಿಗಳನ್ನು ತನ್ನ ಮನೆಯಲ್ಲಿ ಸಂಗ್ರಹಿಸಿಕೊಟ್ಟುಕೊಂಡಿದ್ದ.
ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯಂತೆ ಕ್ಯಾಂಪ್ ಇನಸ್ಪೆಕ್ಟರ್ ಡಿ. ಸಂತೋಷಕುಮಾರ ಹಾಗೂ ಕ್ಯಾಂಪ್ ಠಾಣೆಯ ಸಿಬ್ಬಂದಿಯಾದ ಬಿ. ಆರ್. ಡೂಗ್ ಎಎಸ್‌ಐ, ಸಿ. ಎಸ್. ಸಿದಗೌಡರ ಎಎಸ್‌ಐ, ಜೆ. ಎಂ. ಮಗದುಮ್, ಬಿ ಬಿ ಗೌಡರ, ಎ ಕೆ ಶಿಂತ್ರೆ, ಎಂ ಎ ಪಾಟೀಲ, ಬಿ.ಎಮ್. ಕಲ್ಲಪ್ಪನವರ, ಬಿ. ಎಮ್. ನರಗುಂದ, ಎ. ಬಿ. ಘಟ್ಟದ, ಬಿ ಎಸ್ ರುದ್ರಾಪೂರ, ಅರುಣಕುಮಾರ ಪಾಟೀಲ ದಾಳಿ ಮಾಡಿದರು.
ಸುಮಾರು ರೂ. 1 ಲಕ್ಷ ರೂ. ಮೌಲ್ಯದ ಒಟ್ಟು ೬೩.೬೪೫ ಲೀಟರ್‌ನಷ್ಟು ವಿವಿಧ ಕಂಪನಿಯ ಸಾರಾಯಿ ತುಂಬಿದ ಬಾಟಲ್‌ಗಳನ್ನು ಜಪ್ತ್ ಮಾಡಿ ಅವನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಮೀಟರ್ ಬಳಸದ ಅಟೋರಿಕ್ಷಾಗಳ ವಿರುದ್ಧ ಪ್ರಕರಣ
ಬೆಳಗಾವಿ ನಗರ ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆಯವರ (ಆರ್‌ಟಿಓ) ಜಂಟಿ ಕಾರ್ಯಾಚರಣೆಯಲ್ಲಿ, ಮೀಟರ್ ಹಾಕದೇ ಮನಸೋ ಇಚ್ಛೆಯಂತೆ ಬಾಡಿಗೆ ಪಡೆಯುವ, ಹೆಚ್ಚಿನ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಚಾಲಕರುಗಳ ವಿರುದ್ಧ ಕ್ರಮ ಕೈಕೊಂಡು ಒಟ್ಟು ೮೦ ಆಟೋರಿಕ್ಷಾಗಳನ್ನು ಪರಿಶೀಲಿಸಿದ್ದು, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ೦೫ ಆಟೋರಿಕ್ಷಾಗಳ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ರೂ.೨,೧೦೦ ಸ್ಥಳದಂಡ ವಿಧಿಸಲಾಗಿದೆ.
ನಗರದಲ್ಲಿಯ ಆಟೋರಿಕ್ಷಾ/ಶಾಲಾ ವಾಹನಗಳಲ್ಲಿ ನಿಗಧಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಿಸದಂತೆ ಪಾಲಕರು ಎಚ್ಚರ ವಹಿಸಬೇಕೆಂದು ಹಾಗೂ ಆಟೋರಿಕ್ಷಾ/ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ವಾಹನ ಸಂಖ್ಯೆ ಸಮೇತ ನಗರ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: ೧೦೦ & ೨೪೦೫೨೩೩ ಹಾಗೂ ವಾಟ್ಸ್ಆಪ್ ಸಂಖ್ಯೆ:೯೪೮೩೯೩೧೧೦೦ ನೇದ್ದಕ್ಕೆ ಮಾಹಿತಿ ನೀಡಲು ಪೊಲೀಸರು ಕೋರಿದ್ದಾರೆ.
ನಗರದಲ್ಲಿಯ ಆಟೋರಿಕ್ಷಾ ಚಾಲಕರು, ಮಾಲೀಕರು ಹಾಗೂ ಆಟೋರಿಕ್ಷಾ ಸಂಘದವರು ಕಡ್ಡಾಯವಾಗಿ ಆಟೋ ಮೀಟರ್ ಬಳಸಿ ಸರ್ಕಾರ ನಿಗಧಿಪಡಿಸಿದ ದರದಂತೆ ಬಾಡಿಗೆ ಪಡೆಯುವುದು ಮತ್ತು ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲ ಸಮರ್ಪಕ ದಾಖಲಾತಿಗಳನ್ನು ಹೊಂದಿರಬೇಕು. ನಿಗಧಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸಬಾರದು, ತಪ್ಪಿದಲ್ಲಿ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ