ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಾಹನ ಕಳ್ಳನನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಆತನಿಂದ 4 ವಾಹನ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗದಲ್ಲಿ ನಡೆಯುತ್ತಿದ್ದ ವಾಹನ ಕಳ್ಳತನಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನಗರದ ಪೊಲೀಸ್ ಅಧಿಕಾರಿಗಳಿಗೆ ಮತ್ತು ವಿಶೇಷ ಘಟಕಗಳಿಗೆ ವಾಹನ ಕಳ್ಳರನ್ನು ಪತ್ತೆ ಮಾಡಲು ಪೊಲೀಸ್ ಆಯುಕ್ತರು ಆದೇಶಿಸಿದ್ದರು.
ಪ್ರಕರಣಗಳ ಪತ್ತೆ ಕಾರ್ಯದಲ್ಲಿ ನಿರತರಾದ ಯು. ಎಚ್. ಸಾತೇನಹಳ್ಳಿ, ಪಿಐ ಹಾಗೂ ಸಿಸಿಬಿ ಘಟಕದ ಸಿಬ್ಬಂದಿ ಹೆಚ್ ಎಸ್ ನಿಸ್ಸುನ್ನವರ, ಶ್ರೀಧರ ಭಜಂತ್ರಿ ಮತ್ತು ಯಾಶೀನ ನಧಾಫ್ ಮಹಾದ್ವಾರ ರೋಡ ಹತ್ತಿರ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ವಾಚರಣೆಗೆ ಒಳಪಡಿಸಿದರು.
ನಾಗೇಶ ವೈಜನಾಥ ರೇಡೇಕರ (೩೭, ಸಂಭಾಜಿ ಗಲ್ಲಿ, ಬೆಳಗಾವಿ) ಎಂಬುವವನ ಬಳಿ ಇದ್ದ ವಾಹನದ ಕುರಿತು ವಿಚಾರಿಸಿದಾಗ ತಾನು ಈ ವಾಹನವನ್ನು ಜುಲೈ ತಿಂಗಳಲ್ಲಿ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆತನನ್ನು ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿ ನಾಗೇಶ ರೇಡೇಕರ ಇಂತಹ ಒಟ್ಟು ೪ ವಾಹನಗಳನ್ನು ಕಳುವು ಮಾಡಿದ್ದಾಗಿ ಒಪ್ಪಿಕೊಂಡು, ಕಳುವು ಮಾಡಿ ಮುಚ್ಚಿಟ್ಟ ೨-ಆಕ್ಟಿವಾ ಮತ್ತು ೨-ಅಕ್ಸೆಸ್ ಹೀಗೆ ೪ ಪ್ರತ್ಯೇಕ ಪ್ರಕರಣಗಳಲ್ಲಿ ೪ ವಾಹನಗಳನ್ನು ಕಳುವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಆರೋಪಿತನಿಂದ ಸುಮಾರು ರೂ.೧,೧೩,೦೦೦ ಮೌಲ್ಯದ ಎಲ್ಲ ೪ ದ್ವಿಚಕ್ರ ವಾಹನಗಳನ್ನು ಜಪ್ತಪಡಿಸಿಕೊಂಡು ಆತನ ವಿರುದ್ಧ ಮಾರ್ಕೆಟ, ಶಹಾಪೂರ ಹಾಗೂ ಖಡೇಬಜಾರ ಠಾಣೆಯ ವಾಹನ ಕಳುವಿನ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ