ರಾತ್ರಿ ವೇಳೆ ರಸ್ತೆ ದರೋಡೆ ಮಾಡುತ್ತಿದ್ದ ಖತರ್ ನಾಕ್ ಗ್ಯಾಂಗ್ ಶಿರಸಿ ಪೊಲೀಸರ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಶಿರಸಿ:  ರಾತ್ರಿ ವೇಳೆ  ರಸ್ತೆಯಲ್ಲಿ ವಾಹನಗಳನ್ನು ಅಡ್ಗಟ್ಟಿ ದರೋಡೆ ಮಾಡುತ್ತಿದ್ದ ಖತರನಾಕ್ ಗ್ಯಾಂಗ್ ನ್ನು ಶಿರಸಿ ಹಾಗೂ ಬನವಾಸಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಶಿರಸಿಯ ವಿವಿಧ ರಸ್ತೆಯಲ್ಲಿ ಹಾಗೂ ಬನವಾಸಿ ಭಾಗದಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ಈ ಗ್ಯಾಂಗ್ ದರೋಡೆ ಮಾಡುತ್ತಿತ್ತು.  ಶಿರಸಿ ಗ್ರಾಮೀಣ ಠಾಣೆ ಹಾಗೂ ಬನವಾಸಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಜೀವ ಉಜ್ಜಪ್ಪ ಗೊಲ್ಲರ (22), ಗಣೇಶ ಕುಮಾರ ಕೃಷ್ಣಪ್ಪ  ಗೊಲ್ಲರ (21) ಹಾಗೂ ಅಜ್ಜಪ್ಪ @ಅರ್ಜುನ ಮಂಜಪ್ಪ ಗೊಲ್ಲರ( 28)  ಬಂಧಿತರು.
 ಡಿ.೨೮ರಂದು ಹೆಗಡೆಕಟ್ಟಾ ಕ್ರಾಸ್, ಬನವಾಸಿ ರಸ್ತೆ ಸೇರಿದಂತೆ ಹಲವೆಡೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ ಹಾಗೂ ಮೊಬೈಲ್ ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆ ಹಾಗೂ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.
 ಆರೋಪಿಗಳ ಬಂಧನಕ್ಕಾಗಿ ಶಿರಸಿ ಪೊಲೀಸರು ಐದು  ತಂಡವನ್ನು ರಚಿಸಿ ತನಿಖೆ ಪ್ರಾರಂಭಿಸಿದ್ದರು. ದರೋಡೆಗೆ ಒಳಗಾದವರ ಬಳಿ ಆರೋಪಿಗಳ ಚಿತ್ರಣ ಹಾಗೂ ಬಳಸಿದ ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಖಾಕಿ ಪಡೆ ಆರೋಪಿಗಳ ಬಂಧನಕ್ಕಾಗಿ ತೀವ್ರ ಹುಡುಕಾಟ ಪ್ರಾರಂಭಿಸಿತ್ತು.
ಡಿ.30ರಂದು ಮತ್ತೆ ದರೋಡೆಗೆ ಇಳಿದಿದ್ದ ಖಧಿಮರನ್ನು ಚೇಸ್ ಮಾಡಿ ಮಳಗಿ ಬಳಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಮ್ಮ ವಶಕ್ಕೆ ಪಡೆಯುವಲ್ಲಿ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ.
*ದರೋಡೆಗೆ ಇಳಿದಿದ್ದೇಕೆ ಗೊತ್ತೇ?*
ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಹಾಗೂ ಮೊಬೈಲ್ ಗಳನ್ನು ಕಂತಿನ ಸಾಲದ ಮೇಲೆ ಖರಿದಿ ಮಾಡಿದ್ದ ಆರೋಪಿಗಳು ಸಾಲ ತೀರಿಸಲು ಏನಾದರೂ ಉಪಾಯ ಮಾಡಬೇಕು ಎಂದು ಯೋಚಿಸುತ್ತಿದ್ದರಂತೆ. ಆಗ ಅವರ ತಲೆಗೆ ಬಂದಿದ್ದೆ ದರೋಡೆ ಮಾಡುವ ಐಡಿಯಾ.
ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ದರೋಡೆಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುವ ಉದ್ದೇಶ ಇವರದ್ದಾಗಿತ್ತು ಎನ್ನಲಾಗಿದೆ. ಆದರೆ ಖಾಕಿ ಪಡೆ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
 ಕಳೆದ ನಾಲ್ಕು ದಿನಗಳಿಂದ ರಾತ್ರಿವೇಳೆ ಸಂಚರಿಸುವ ಬೈಕ್ ಸವಾರರಿಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹಿಂದುಗಡೆಯಿಂದ ಮತ್ತೊಂದು ಬೈಕ್ ಬಂದರೂ ಸಹ ಭಯಬೀಳುವಷ್ಟರ ಮಟ್ಟಿಗೆ ಈ ಖಧಿಮರು ತಮ್ಮ ಕೈಚಳಕ ತೋರಿದ್ದರು.ಪೋಲಿಸ್ ಇಲಾಖೆ ಆರೋಪಿಗಳನ್ನು ಬಂಧಿಸಿ ಜನರಲ್ಲಿದ್ದ ಭಯವನ್ನು ದೂರಮಾಡಿದೆ.
ಬಂಧಿತ ಆರೋಪಿಗಳಿಂದ ೧೩,೫೦೦ರೂ ನಗದು , ಎರಡು ಬೈಕ್ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆ ಯಲ್ಲಿ ಡಿವೈಎಸ್ಪಿ ಗಣೇಶ ಕೆ ಎಲ್, ಸಿಪಿಐ ರಾಮಚಂದ್ರ ನಾಯಕ್ ಹಾಗೂ ಶಿರಸಿ ಉಪ ವಿಭಾಗದ ಎಲ್ಲಾ ಠಾಣೆಯ ಪಿಎಸ್ಐ ಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಇವರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹರ್ಷ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
https://pragati.taskdun.com/police-bandobasth-for-new-year-celebration/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button