ರಾವಣನ ಪರಿವಾರ – ರಾಮಾಯಣ ಭಾಗ 4

ನೀತಾ ರಾವ್

ರಾಮಾಯಣದಲ್ಲಿ ರಾವಣನು ಮುಖ್ಯ ಖಳನಾಯಕ. ರಾಮ-ಲಕ್ಷ್ಮಣರು ತಮ್ಮ ಬದುಕಿನುದ್ದಕ್ಕೂ ಅನೇಕ ಅಸುರರನ್ನು ಕೊಂದು ಶಿಷ್ಟ ರಕ್ಷಣೆ ಮಾಡಿ ತಮ್ಮ ಹುಟ್ಟು ಮತ್ತು ಬದುಕಿನ ಮೂಲ ಉದ್ದೇಶವನ್ನು ಪೂರೈಸಿದ್ದು ಹೌದಾದರೂ ರಾವಣನ ಸಂಹಾರ ರಾಮಾಯಣದ ಕ್ಲೈಮ್ಯಾಕ್ಸ ಘಟನೆ.
ರಾವಣನ ಸಹೋದರಿ ಶೂರ್ಪಣಕಿಯ ವಿವಾಹದ ಬೇಡಿಕೆಯನ್ನು ತಿರಸ್ಕರಿಸಿದ್ದಷ್ಟೇ ಅಲ್ಲದೇ ಅವಳ ಮೂಗನ್ನು ಕತ್ತರಿಸಿದ್ದು ಲಕ್ಷ್ಮಣನ ಬಹುದೊಡ್ಡ ಪ್ರಮಾದ. ಅದೇ ಮುಂದಿನ ಎಲ್ಲ ಘಟನೆಗಳಿಗೆ ಕಾರಣವಾಯ್ತು ಎಂದು ನಮ್ಮ ಮನಸ್ಸು ತರ್ಕಿಸುತ್ತದೆ. ಆದರೆ ರಾವಣನ ಸಂಹಾರವೇ ರಾಮಾವತಾರದ ನಿಜ ಉದ್ದೇಶವೆನ್ನುವುದೂ ನಮಗೆ ತಿಳಿದಿದೆ.
ರಾವಣನು ರಾಕ್ಷಸ. ದೇವರಿಂದಲೇ ವರ ಪಡೆದು ಅವರನ್ನೇ ಹೆದರಿಸುವವ. ಇದಿಷ್ಟೇ ಆಗಿದ್ದರೆ ರಾಮನು ಅವನನ್ನು ಸಂಹರಿಸಲು ಸಮರ್ಥನೆ ಒದಗಿ ಬರುತ್ತಿರಲಿಲ್ಲ. ತನ್ನ ತಂಗಿಗಾದ ಅಪಮಾನವನ್ನೇ ನೆಪವಾಗಿಟ್ಟುಕೊಂಡು ಅವನು ಸೀತೆಯನ್ನೇ ಅಪಹರಿಸುವ ಯೋಜನೆಯನ್ನು ಹಾಕುತ್ತಾನಲ್ಲಾ, ಅಲ್ಲಿಗೆ ಸ್ವತಃ ತನ್ನ ಅಂತ್ಯವನ್ನು ತಾನೇ ಬರೆದುಕೊಳ್ಳುತ್ತಾನೆ. ಪರರ ಸಂಪತ್ತು, ಭೂಮಿ, ಮತ್ತು ಹೆಣ್ಣು, ಇವುಗಳ ಮೇಲೆ ಕಣ್ಣಿಟ್ಟವರೆ ಯಾವತ್ತೂ ಸುಖವಾಗಿರುವುದು ಸಾಧ್ಯವಿಲ್ಲ. ಆದರೆ ಇವುಗಳಲ್ಲಿ ಪರಸ್ತ್ರೀ ಮೋಹವಂತೂ ದುರಂತದಲ್ಲೇ ಕೊನೆಗೊಳ್ಳುವುದು ನಿಶ್ಚಿತ. ಅನೈತಿಕತೆ ಯಾವತ್ತೂ ಶಾಂತಿ, ಸಮಾಧಾನಗಳನ್ನು ತರುವುದಿಲ್ಲ. ಸಾವು-ನೋವುಗಳೇ ಅದರ ಉಡುಗೊರೆಗಳು. ರಾವಣನೇನೋ ಸೀತೆಯನ್ನು ಬಲವಂತವಾಗಿ ಮೋಸದಿಂದ ಅಪಹರಿಸಿ ತನ್ನ ದೇಶ, ಸ್ವರ್ಣನಗರಿ ಲಂಕೆಗೆ ತಂದ.‌ ಆದರೆ ಅವಳ‌ ಇಚ್ಛೆಗೆ ವಿರುದ್ಧವಾಗಿ ಅವಳನ್ನು ತನ್ನ ಅಂತಃಪುರಕ್ಕೆ ಕರೆತಂದು ತನ್ನವಳನ್ನಾಗಿಸಿಕೊಳ್ಳುವುದು ಅವನಿಗೆ ಸಾಧ್ಯವಿರಲಿಲ್ಲ. ಅದಕ್ಕೆ ಕಾರಣ ಸೀತೆಯ ಪ್ರಖರವಾದ ಪತಿವ್ರತಾ ಧರ್ಮವೂ ಇರಬಹುದು, ಸ್ವತಃ ಅವನದೂ ಒಂದು ನೀತಿ ಇರಬಹುದು. ಅಪಹರಿಸಿ ತಂದರೂ ಪರಸ್ತ್ರೀಯನ್ನು ಅವಳ ಒಪ್ಪಿಗೆಯಿಲ್ಲದೇ ತನ್ನವಳನ್ನಾಗಿಸಿಕೊಳ್ಳುವುದು ಅವನು ಪಾಲಿಸುತ್ತ ಬಂದ ಧರ್ಮನಿಷ್ಠೆಗೆ ವಿರುದ್ಧವಾಗಿರಬಹುದು. ಆದರೆ ಅವಳ ಮನವೊಲಿಸಲು ಅಥವಾ ಹೆದರಿಸಲು ರಾವಣನು ಮೇಲಿಂದ ಮೇಲೆ ಪ್ರಯತ್ನಿಸುವುದಂತೂ ಸುಳ್ಳಲ್ಲ. ಈ ಎಲ್ಲ ಕೃತ್ಯಗಳಲ್ಲಿ, ಪ್ರಯತ್ನಗಳಲ್ಲಿ ರಾವಣನ ಪರಿವಾರವು ಅವನ ಬೆನ್ನಿಗಿತ್ತೇ? ಖಂಡಿತ ಇಲ್ಲ.
ರಾವಣನ ಧರ್ಮಪತ್ನಿ ಮಂಡೋದರಿಯು ಪಂಚ ಪತಿವ್ರತೆಯರಲ್ಲಿ ಒಬ್ಬಳು. ಅಹಲ್ಯಾ, ದ್ರೌಪದಿ, ಸೀತಾ, ತಾರಾ ಮತ್ತು ಮಂಡೋದರಿಯರನ್ನು ಪೂಜನೀಯ ಸ್ಥಾನದಲ್ಲಿಟ್ಟು ಬರೆದ ಶ್ಲೋಕವೇ ಇದೆ. ಅಂಥ ಪತಿವ್ರತೆಯು ತನ್ನ ಪತಿ ರಾವಣೇಶ್ವರನು ಪರಸ್ತ್ರೀಯನ್ನು ಅಪಹರಿಸಿ ತಂದುದನ್ನು ಯಾವತ್ತಿಗೂ ಸಹಿಸಲಾರಳು. ಅಷ್ಟೇ ಅಲ್ಲ ಅವಳು ರಾವಣನಿಗೆ ಸಾಕಷ್ಟು ಸಲ ಬುದ್ಧಿಯನ್ನೂ ಹೇಳಿ ಅವನ ಕೃತ್ಯವು ಅನೈತಿಕವಾದುದೆಂದು ಮನಗಾಣಿಸಲು ಪ್ರಯತ್ನಿಸಿದಳು. ಆದರೆ ತನ್ನ ಬಲಾಬಲದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ರಾವಣನಿಗೆ ಅವಳ ಹಿತವಚನಗಳು ಪಥ್ಯೆಯಾಗುವುದಿಲ್ಲ.‌ ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವ ಮಾತು ರಾವಣ ಮತ್ತು ಅವನಂಥ ಅನೇಕರಿಗೆ ಅನ್ವಯಿಸುತ್ತದೆ. ತನ್ನ ಮೋಹದಿಂದಾಗಿ, ತನ್ನ ಸ್ವಂತದ ದುರಹಂಕಾರದಿಂದಾಗಿ ಅವನು ಸಾಧ್ವಿಯಾದ ತನ್ನ ಹೆಂಡತಿಯ ಮಾತನ್ನು ಅಲಕ್ಷಿಸಿದ. ಮಹಾಪರ್ವತದಂತಿದ್ದ ತನ್ನ ತಮ್ಮ ಕುಂಭಕರ್ಣನನ್ನು ದೀರ್ಘ ನಿದ್ರೆಯಿಂದೆಬ್ಬಿಸಿ ಅವನನ್ನು ತನ್ನ ಪರವಾಗಿ ರಾಮನ ವಿರುದ್ಧ ಹೋರಾಡಲು ಪ್ರೇರೇಪಿಸಿದ. ಸ್ವತಃ ಕುಂಭಕರ್ಣನಿಗೆ ಅಣ್ಣನ ಈ ಯುದ್ಧದ ನಿರ್ಣಯ ಸರಿಯೆನಿಸಲಿಲ್ಲ. ರಾಮನಿಗೆ ಅವನ ಹೆಂಡತಿಯನ್ನು ಮರಳಿಸಿಬಿಡುವಂತೆ ಅವನು ಕೂಡ ಅಣ್ಣನನ್ನು ಕೇಳಿಕೊಂಡ. ಆದರೆ ಲಂಕಾಧಿಪತಿ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವನ ಮೂರ್ಖತನಕ್ಕೆ ಕುಂಭಕರ್ಣನು ಬಲಿಯಾದ. ಶ್ರೇಷ್ಠ ಧನುರ್ಧಾರಿ, ಇಂದ್ರನನ್ನು ಜಯಿಸಿದ, ಬ್ರಹ್ಮನಿಂದಲೇ ವರ ಪಡೆದ ವೀರಾಧಿವೀರ ಪುತ್ರ ಇಂದ್ರಜಿತುವು ಕೂಡ ತಂದೆಗೆ ಈ ಯುದ್ಧವು ಬೇಡವೆಂದು ಹೇಳುತ್ತಾನೆ. ಊಹೂಂ, ಅವನ ಮಾತೂ ನಾಟುವುದಿಲ್ಲ. ಮಗನನ್ನೂ ತನ್ನ ಲಾಲಸೆಗಾಗಿ ಬಲಿ ಕೊಡುತ್ತಾನೆ. ಸ್ವತಃ ಮಾವನು ಕೂಡ ರಾವಣನಿಗೆ ಬುದ್ಧಿ ಹೇಳುತ್ತಾನೆ. ತನ್ನ ಪಾಳಯದ, ಪರಿವಾರದ ಒಬ್ಬೊಬ್ಬರನ್ನೇ ಕಳೆದುಕೊಳ್ಳುತ್ತ ಬಂದರೂ ರಾವಣೇಶ್ವರನ ಅಹಂಕಾರ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಕೊನೆಗೆ ತಾನೂ ಕೂಡ ರಾಮನ ಕೈಯಿಂದ ಹತನಾಗುತ್ತಾನೆ. ಯಾಕಾಗಿ ರಾವಣನು ಇಷ್ಟೆಲ್ಲ ಸ್ವಜನರನ್ನು ಬಲಿಕೊಟ್ಟ? ರಾಜ್ಯದ ಹಿತಕ್ಕಾಗಿ, ಪ್ರಜಾ ಪಾಲನೆಗಾಗಿ ಅವನು ಇಂಥದೊಂದು ಯುದ್ಧವನ್ನು ಮಾಡಿ ವೀರಸ್ವರ್ಗವನ್ನು ಸೇರಿದ್ದರೆ ಅಜರಾಮರನಾಗುತ್ತಿದ್ದ. ಅವನ ಅತಿ ಹತ್ತಿರದ ಬಂಧುಮಿತ್ರರ ತ್ಯಾಗಕ್ಕೂ ಒಂದು ಶ್ರೇಷ್ಠತೆ ಒದಗಿ ಬರುತ್ತಿತ್ತು. ಪರಿವಾರದ ಪ್ರತಿಯೊಬ್ಬರೂ ಅವನ ನಡೆಯನ್ನು ಖಂಡಿಸಿ, ಸರಿದಾರಿಯನ್ನು ತೋರಿದರೂ ಮೊಂಡುಬಿದ್ದು ತನ್ನ ಛಲವನ್ನೇ ಸಾಧಿಸಿದ ರಾವಣನ ಸಂಗವನ್ನವರು ಬಿಡಲಿಲ್ಲ. ಏನೇ ಆಗಲಿ, ಅವನ ಪರವಾಗಿಯೇ ಯುದ್ಧ ಮಾಡುವುದು ತಮ್ಮ ಧರ್ಮವೆಂದು ನಂಬಿದರು. ಮತ್ತು ವೀರಮರಣವನ್ನಪ್ಪಿದರು. ಹಾಗೆ ನೋಡಿದರೆ ಅವರ ಸಾವು ನ್ಯಾಯವಲ್ಲವೇ ಅಲ್ಲ. ತಾವು ನಂಬದ ಸಿದ್ಧಾಂತಕ್ಕಾಗಿ, ತಾವು ಮಾಡದ ಅಪರಾಧಕ್ಕಾಗಿ ಅವರೆಲ್ಲ ಬಹು ದೊಡ್ಡ ಬೆಲೆಯನ್ನೇ ತೆರಬೇಕಾಯ್ತು. ಈಗೊಮ್ಮೆ ವಿಚಾರ ಮಾಡಿ. ನಮ್ಮ ನಿಜ ಜೀವನದಲ್ಲೂ ನಾವು ಇಂಥ ಎಷ್ಟೋ ರಾವಣರನ್ನು ಭೆಟ್ಟಿಯಾಗಿರುತ್ತೇವೆ, ಅಥವಾ ಸ್ವತಃ ನಾವೇ ರಾವಣರಾಗಿರಬಹುದು. ಕಲಿಯುಗದ ಅಂಥ ರಾವಣರು ತಾವು ನಂಬಿದ ಭ್ರಮೆಗಳನ್ನು ಬದುಕಲೆತ್ನಿಸುತ್ತಾರೆ, ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತಲಿರುವವರನ್ನೂ ನಂಬಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಾರೆ. ಒಮ್ಮೊಮ್ಮೆ ಅವರ ಬಂಡವಾಳವೆಲ್ಲ ಗೊತ್ತಿದ್ದರೂ ಮನೆಯವರು‌ ಕೇವಲ ಆ ಒಂದು ಸಂಬಂಧದ ಎಳೆಯಿಂದಾಗಿ ಅವರೊಡನೆಯೇ ಬಂಧಿಸಲ್ಪಟ್ಟಿರುತ್ತಾರೆ, ಮತ್ತು ಅದೊಂದೇ ಕಾರಣಕ್ಕಾಗಿ ಅವರ ಎಲ್ಲ ಉಪಟಳಗಳನ್ನು, ತಪ್ಪುಗಳನ್ನು ಸಹಿಸುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಮರ್ಥನೆಗೂ ಇಳಿಯುತ್ತಾರೆ. ತಮ್ಮ ಮೂರ್ಖತನದಿಂದಾಗಿ ತನ್ನಿಡೀ ಪರಿವಾರವನ್ನೇ ಅವನತಿಯತ್ತ ಕೊಂಡೊಯ್ವ ಜನರು ಇದ್ದಾರೆ. ಅನೈತಿಕ ಸಂಬಂಧಗಳು ಇವತ್ತಿಗೂ ದುರಂತದಲ್ಲೇ ಕೊನೆಗೊಳ್ಳುತ್ತವೆ. ಅನೈತಿಕ ಆಸೆ-ಆಮಿಷಗಳು ಮನುಷ್ಯನನ್ನು ಪ್ರಪಾತಕ್ಕೆ ತಳ್ಳುವ ಉದಾಹರಣೆಗಳು ಇಂದಿಗೂ ಸಿಗುತ್ತವೆ.
ಆದರೆ ಆಯ್ದ ಕೆಲವೇ ಕೆಲವು ಜನ ಇರುತ್ತಾರೆ, ಅಂದಿನ ವಿಭೀಷಣನಂತೆ. ಬಲಶಾಲಿ ಅಣ್ಣನ ಪ್ರಮಾದಗಳನ್ನೂ, ಅಧರ್ಮವನ್ನೂ ವಿರೋಧಿಸುವವರು. ನ್ಯಾಯದ ಮಾರ್ಗದಲ್ಲಿ ನಡೆಯಲು ಒಪ್ಪದ ಅಣ್ಣನ ಅಧರ್ಮದಲ್ಲಿ ಪಾಲುದಾರನಾಗಲು ಒಪ್ಪದವರು. ಎಲ್ಲಿ ಧರ್ಮವಿದೆಯೋ, ಎಲ್ಲಿ ನ್ಯಾಯ ಮತ್ತು ನೀತಿ ಇದೆಯೋ ಅಲ್ಲಿಗೆ ಹೋಗುವವರು, ಹಾಗಿದ್ದವನು ವೈರಿಯಾದರೂ ಪರವಾಗಿಲ್ಲ ಅವರ ಬಣವನ್ನು ಸೇರಿದವರು. ಹೌದು, ರಾವಣನ ಅನೀತಿ, ಅಧರ್ಮವನ್ನು ಖಂಡಿಸಿ ರಾಮನ ಪಕ್ಷವನ್ನು ಸೇರಿದ ವಿಭೀಷಣನಿಗೆ ಇಂದ್ರಜಿತು, ಕುಂಭಕರ್ಣ, ಸ್ವತಃ ರಾವಣನೂ ದೇಶದ್ರೋಹಿಯ ಪಟ್ಟ ಕಟ್ಟುತ್ತಾರೆ. ಆದರೆ ವಿಭೀಷಣನು ತನ್ನ ನಿರ್ಧಾರದಿಂದ ಕಿಂಚಿತ್ತೂ ಹಿಂದೆ ಸರಿಯುವುದಿಲ್ಲ. ಒಂದು ಸಲವೂ ಚಂಚಲನಾಗುವುದಿಲ್ಲ. ಹಾಂ, ತನ್ನ ಅಣ್ಣ ಕುಂಭಕರ್ಣ ವೀರಸ್ವರ್ಗವನ್ನು ಸೇರಿದಾಗ, ತನ್ನ ಪ್ರೀತಿಯ ಇಂದ್ರಜಿತನು ಮರಣಿಸಿದಾಗ, ಅಣ್ಣ ರಾವಣನು ಮಡಿದಾಗ, ಪ್ರತಿಸಲವೂ ದುಃಖ ಉಕ್ಕೇರಿ ಬಂದು ಅವನು ಕಂಬನಿ ಮಿಡಿಯುತ್ತಾನೆ. ಅದು ತನ್ನ ಒಡಹುಟ್ಟಿದ ಅಣ್ಣಂದಿರನ್ನು, ಪುತ್ರಸಮಾನ ಇಂದ್ರಜಿತುವನ್ನು ಕಳೆದುಕೊಂಡಾಗ ಆಗುವ ಸಹಜ ಸಂತಾಪ. ಆದರೆ ರಾಮನ‌ ಬಗೆಗಿನ ಅವನ ಭಕ್ತಿಯಲ್ಲಿ ಕಿಂಚಿತ್ತೂ ಬಾಧೆ ಬರುವುದಿಲ್ಲ. ಉದ್ದಕ್ಕೂ ವಿಭೀಷಣನ ಧರ್ಮಪರತೆ, ನ್ಯಾಯನಿಷ್ಠೆ ಮತ್ತು ಗಾಂಭೀರ್ಯ ಮನ ಸೆಳೆಯುತ್ತದೆ.
ಹೀಗೆ ರಾವಣನ ಪರಿವಾರವೆಲ್ಲವೂ ನ್ಯಾಯಪರರಿಂದಲೇ ತುಂಬಿದ್ದರೂ ರಾವಣನ ಮನಸ್ಸನ್ನು ಬದಲಿಸಲು ಅವರಿಂದ ಆಗಲಿಲ್ಲ ಎನ್ನುವುದೇ ವಿಷಾದವನ್ನು ಹುಟ್ಟಿಸುತ್ತದೆ. “ಬೇವು ಬೆಲ್ಲದೊಳಿಡಲೇನು ಫಲ? ಹಾವಿಗೆ ಹಾಲೆರೆದೇನು ಫಲ?” ಎನ್ನುವ ದಾಸಪದವು ರಾವಣ ಮತ್ತು ಅವನಂಥವರ ಕಥೆಯನ್ನು ಕೇಳಿಯೇ ಹುಟ್ಟಿದ್ದಿರಬಹುದು.
ಧರ್ಮನಿಷ್ಠೆಗೂ, ಧರ್ಮಭ್ರಷ್ಟತೆಗೂ ಉದಾಹರಣೆಗಳಾಗಿ ಇವರೆಲ್ಲ ಸದಾಕಾಲ ಜನಮಾನಸದಲ್ಲಿ ಉಳಿಯುತ್ತಾರೆ.

(ಮುಂದುವರೆಯುತ್ತದೆ)

ಭಾಗ 1 –  ಅಂದಿನ ರಾಮಾಯಣ ಇಂದು ನೋಡಿದಾಗ….

ಭಾಗ 2 –  ಇಂದಿಗೂ ರಾಮಾಯಣ ಪ್ರಸ್ತುತವೇ?

ಭಾಗ 3 – ಸೋದರ ಪ್ರೇಮದ ಉತ್ಕೃಷ್ಟ ಮಾದರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button