ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಜ್ಯದ ಹಲವೆಡೆ ಈಗಾಗಲೇ ಬಿರುಗಾಳಿ ಸಹಿತ, ಭಾರಿ ಮಳೆ ಆರಂಭವಾಗಿದ್ದು, ವರುಣನ ಆರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಚಂಡಮಾರುತ ಭೀತಿ ಎದುರಾಗಿದೆ. ದೇಶದಲ್ಲಿ ಮತ್ತೆ ಚಂಡಮಾರುತದ ಭೀತಿ ಶುರುವಾಗಿದೆ.
ಮುಂದಿನ 24 ಗಂಟೆಯಲ್ಲಿ ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಅಸನಿ ಚಂಡಮಾರುತ ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದ್ದು, ಮೇ 10ರಂದು ಆಂಧ್ರಪ್ರದೇಶ, ಓಡಿಶಾ ಕರಾವಳಿ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಸನಿ ಚಂಡಮಾರುತ ಹಿನ್ನೆಲೆಯಲ್ಲಿ ಒಡಿಶಾದ ಗಜಪತಿ, ಗಂಜಾಂ, ಪುರಿ, ಖುರ್ದಾ, ಕಟಕ್ ನಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದ್ದು, ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದು, ಒಡಿಶಾ, ಆಂಧ್ರ ಕರಾವಳಿ ಭಾಗದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 16 ಕಿ.ಮೀ ವೇಗವಾಗಿ ಚಲಿಸುತ್ತಿದ್ದು, ಸಂಜೆ ಬಳಿಕ ತೀವ್ರ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆ ಇದೆ. ಗಂಟೆಗೆ 80-105 ಕಿಮೀ ವರೆಗೂ ವೇಗ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ತೆಲಂಗಾಣ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು, ಮಿಂಚು ಸಹಿತ ಮಳೆಯಾಗಲಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಚಂಡಮಾರುತದ ಪರಿಣಾಮ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಆಪರೇಷನ್ ಕಮಲ ಅನಿವಾರ್ಯ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ