Belagavi NewsBelgaum NewsKannada NewsLatest

*ಎಲ್ಲ ವರ್ಗದ ರೋಗಿಗಳ ಸೇವೆಗೆ ಬಿಮ್ಸ್ ಸದಾ ಸಿದ್ಧ : ಡಾ. ಅಶೋಕ ಕುಮಾರ ಶೆಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಿಶಿಷ್ಟ ಜಾತಿ, ಪ.ವರ್ಗಗಳ ಜಾಗೃತಿ ಸಮಿತಿ ನೀಡುವ ಸಲಹೆಗಳನ್ನು ಸ್ವೀಕರಿಸಿ, ಅದರಂತೆ ಎಲ್ಲರ ಸಹಕಾರದೊಂದಿಗೆ ಬಿಮ್ಸ್ ಆಸ್ಪತ್ರೆಯು ರೋಗಿಗಳಿಗೆ ಹಾಗೂ ಸಾರ್ವಜನಿಕ ಸ್ನೇಹಿಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೋಗಿಗಳ ಸೇವೆಗೆ ಸದಾ ಸಿದ್ಧವಿದೆ ಎಂದು ಚಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ ತಿಳಿಸಿದರು.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬಿಮ್ಸ್) ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲವಾದ್ದರಿಂದ ಬಿಮ್ಸ್ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮಾರ್ಗದರ್ಶನದಲ್ಲಿ ಪ.ಜಾ, ಪ.ವ. ಜನರಿರುವ ಸ್ಥಳಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗಿತ್ತು ಎಂದರು.

ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸದಸ್ಯರು ಅನೇಕ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಪ್ರಮಾಣ ಪತ್ರವಿಲ್ಲದೆ ಉಚಿತ ಚಿಕಿತ್ಸೆಗೆ ಬರುವ ಪ.ಜಾ, ಪ.ವ. ರೋಗಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಚಿಕಿತ್ಸೆ ನೀಡಲು ತಿಳಿಸಲಾಯಿತು.

Home add -Advt

ಸಭೆಯಲ್ಲಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಂವೇದನಾಶೀಲರನ್ನಾಗಿಸಲು ಹಾಗೂ ಸಾರ್ವಜನಿಕರು ಮತ್ತು ರೋಗಿಗಳ ಜೊತೆಗೆ ಸಮನ್ವಯ ಸಾಧಿಸಲು ಮಾರ್ಗದರ್ಶನ ನೀಡಲಾಯಿತು.

ಪ.ಜಾ, ಪ.ವರ್ಗಗಳ ಯಾವುದೇ ರೀತಿಯ ಅನುದಾನದ ದುರ್ಬಳಕೆಯಾಗಿಲ್ಲ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಂಬಂಧಪಟ್ಟ ಇಲಾಖೆಯವರಿಗೆ ಈ ಕುರಿತು ದಾಖಲೆ ಸಹಿತ ವರದಿ ನೀಡಲಾಗಿದೆ ಎಂಬ ವಿಷಯ ಸೇರಿದಂತೆ ಸಮಿತಿ ಸದಸ್ಯರು ಕೇಳಿದ ವಿವಿಧ ಪ್ರಶ್ನೆಗಳು ಹಾಗೂ ಸಮಸ್ಯೆಗಳ ಕುರಿತು ಸ್ಪಷ್ಟಿಕರಣ ಮತ್ತು ಮಾಹಿತಿ ನೀಡಲಾಯಿತು.

ಪ್ರಸೂತಿ ಹಾಗೂ ತುರ್ತು ಚಿಕಿತ್ಸಾ ಘಟಕದಲ್ಲಾಗುವ ರೋಗಿಗಳ ದಟ್ಟನೆ ನಿಯಂತ್ರಿಸಿ ಶೀಘ್ರ ಚಿಕಿತ್ಸೆ ದೊರೆಯಲು ವಿಶೇಷ ಮುತುವರ್ಜಿ ವಹಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೋಗಿಗಳಿಗೆ ಒಂದು ವಿಶೇಷ ಚಿಕಿತ್ಸೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತು ವಿಚಾರಣೆ ನಡೆಸಿದ ಸಮಿತಿಯು ಚಿಕಿತ್ಸೆ ನೀಡುವಲ್ಲಿ ಯಾವುದೇ ರೀತಿಯ ತಾರತಮ್ಯವಾಗಿಲ್ಲ ಎಂಬ ವರದಿ ನೀಡಿ ಪ್ರಕರಣವನ್ನು ಮುಗಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜದ ಮುಖಂಡರಾದ ಮಲ್ಲೇಶ ಚೌಗುಲೆ, ಪಜಾ, ಪ.ವ. ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸದಸ್ಯರಾದ ವಿಜಯ ತಳವಾರ, ಕರಿಯಪ್ಪ ಗುಡನ್ನವರ, ಸಿದ್ರಾಯಿ ಮೇತ್ರಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರಲ್ಲದೇ ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೆ ರೋಗಿಗಳ ಸೇವೆಗಾಗಿ ಬಿಮ್ಸ್ ಆಸ್ಪತ್ರೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ವೈದ್ಯಕೀಯ ಅಧೀಕ್ಷಕ ಡಾ. ಈರಣ್ಣ ಪಲ್ಲೇದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಚೆನ್ನಯ್ಯನವರ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button