ಕೆಎಲ್ಇ ಸಂಸ್ಥೆಯ ವೈಸ್ ಚೇರಮನ್ ಅಶೋಕ ಬಾಗೇವಾಡಿ ನಿಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಉಪಕಾರ್ಯಾಧ್ಯಕ್ಷರು, ಶಿಕ್ಷಣಪ್ರೇಮಿ, ರೈತಮಿತ್ರ, ನಿಪ್ಪಾಣಿಯ ಅಶೋಕ ಬಾಗೇವಾಡಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
೨೨.೦೩.೧೯೪೫ ರಂದು ನಿಪ್ಪಾಣಿಯಲ್ಲಿ ಜನಿಸಿದ ಶ್ರೀ ಅಶೋಕಣ್ಣಾ ಬಾಗೇವಾಡಿಯವರು ಬಿ.ಕಾಂ.ಪದವೀಧರರು. ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ೧೯೭೫ರಲ್ಲಿ ಆಯ್ಕೆಹೊಂದಿದರು. ಸುದೀರ್ಘ ೪೫ ವರ್ಷಗಳ ವರೆಗೆ ಕೆಎಲ್‌ಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಅವರು ೨೦೦೧ರಲ್ಲಿ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಉಪಕಾರ್ಯಾಧ್ಯಕ್ಷರಾಗಿ ಆಯ್ಕೆಹೊಂದಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರಭಾಕರ ಕೋರೆ ಸಂತಾಪ
ಸರಳ ಸಜ್ಜಿನಿಕೆಯ ವ್ಯಕ್ತಿತ್ವದ ಅಶೋಕಣ್ಣಾ ಬಾಗೇವಾಡಿ ನಿಧನರಾಗಿರುವುದು ಕೆಎಲ್‌ಇ ಸಂಸ್ಥೆಗೆ ಹಾಗೂ ಸಮಾಜಕ್ಕೆ ತುಂಬಲಾರದ ದುಃಖವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ ತೀವ್ರಶೋಕವನ್ನು ವ್ಯಕ್ತಪಡಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಅಹರ್ನಿಶಿ ಶ್ರಮಿಸಿದ ಅಶೋಕ ಬಾಗೇವಾಡಿ ಅವರೊಂದಿಗೆ ಕಳೆದ ೩೫ ವರ್ಷಗಳಿಂದ ನನ್ನ ಒಡನಾಟವಿತ್ತು. ನನ್ನ ಸಹೋದರ ಚಿದಾನಂದ ಕೋರೆಯವರೊಂದಿಗೆ ಕೈಜೋಡಿಸಿದ್ದ ಅವರು ತದನಂತರದಲ್ಲಿ ನನ್ನೊಂದಿಗೂ ಸಂಸ್ಥೆಯ ವಿಕಾಸದಲ್ಲಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶಿಸಿದ್ದರು. ಅವರೊಂದಿಗೆ ನನ್ನ ಒಡನಾಟ ಆಪ್ತವಾಗಿತ್ತು. ಕೆಎಲ್‌ಇ ಸಂಸ್ಥೆಯು ಒಬ್ಬ ಹಿರಿಯ ಮುತ್ಸದ್ದಿಯನ್ನು ಹಾಗೂ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದ್ದಾರೆ.
ಅಶೋಕ ಬಾಗೇವಾಡಿಯವರು ಅವರ ತಂದೆ ದಿ.ಗಣಪತಿ ಐ ಬಾಗೇವಾಡಿಯವರು ೧೯೭೨ ರಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾಗಿದ್ದರು. ದಿ.ಗಣಪತಿ ಬಾಗೇವಾಡಿಯವರು ಗಡಿಭಾಗ ನಿಪ್ಪಾಣಿಯಲ್ಲಿ ಕನ್ನಡ ಶಾಲೆಯನ್ನು ಪ್ರಾರಂಭಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದರು. ಅಂತೆಯೆ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಪ್ರಸಾರ ಮಾಡಲು ನೀಡಿದ ದಾನದ ಫಲವಾಗಿ ಕೆಎಲ್‌ಇ ಪದವಿ ಕಾಲೇಜು ಪ್ರಾರಂಭಗೊಳ್ಳಲು ಸಾಧ್ಯವಾಯಿತು. ಕೆಎಲ್‌ಇ ಸಂಸ್ಥೆಯು ಅವರ ದಾನದ ಸ್ಮರಣಾರ್ಥ ‘ಜಿ.ಐ.ಬಾಗೇವಾಡಿ ಪದವಿ ಕಾಲೇಜು ಎಂದು ನಾಮಕರಣ ಮಾಡಿದೆ.
ಅಂತೆಯೆ ಅಶೋಕಣ್ಣಾ ಬಾಗೇವಾಡಿಯವರು ತಮ್ಮ ತಂದೆಯವರ ಹೆಜ್ಜೆಯಲ್ಲಿಯೇ ಹೆಜ್ಜೆ ಇಟ್ಟು ಗಡಿಭಾಗದಲ್ಲಿ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನೆರವೇರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇವರ ಮುಂದಾಳತ್ವದಲ್ಲಿ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆ ಫಾರ್ಮಸಿ, ಬಿಬಿಎ, ಬಿಸಿಎ, ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಿಸ್ತಾರಗೊಂಡಿದ್ದನ್ನು ನೋಡಬಹುದೆಂದು ಡಾ.ಪ್ರಭಾಕರ ಕೋರೆಯವರು ಸ್ಮರಿಸಿಕೊಂಡಿದ್ದಾರೆ. ಹಾಗೂ ದಿವಂಗತರ ಆತ್ಮಕ್ಕೆ ಆ ಭಗವಂತನು ಚಿರಶಾಂತಿಯನ್ನು ನೀಡಲಿ ಅವರ ಅಗಲಿಕೆಯ ದುಃಖವನ್ನು ಕುಟುಂಬವರ್ಗಕ್ಕೆ ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಕೆಎಲ್‌ಇ ಸಂಸ್ಥೆಯ ಸಮಸ್ತ ಪರಿವಾರದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಶಿವಾನಂದ ಕೌಜಲಗಿ ಸಂತಾಪ
ಅಶೋಕ ಬಾಗೇವಾಡಿಯವರು ನಿಧನರಾಗಿರುವುದು ಕೆಎಲ್‌ಇ ಸಂಸ್ಥೆಗೆ ಹಾಗೂ ಸಮಾಜಕ್ಕೆ ತುಂಬಲಾರದ ದುಃಖವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಮೌಲಿಕ ಕೊಡುಗೆ ನೀಡಿದ್ದ ಅಶೋಕಣ್ಣಾ ಬಾಗೇವಾಡಿಯವರು ಶಿಕ್ಷಣ ಪ್ರೇಮಿಗಳಾಗಿ ಗಡಿನಾಡು ನಿಪ್ಪಾಣಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಿದ್ದರು. ನಿಪ್ಪಾಣಿ ಭಾಗದಲ್ಲಿ ಕೆಎಲ್‌ಇ ಸಂಸ್ಥೆ ವಿಸ್ತರಿಸುವಲ್ಲಿ ಅವರು ನೀಡಿದ ಸೇವೆ ಅಪಾರವಾಗಿದೆ ಎಂದು ಸ್ಮರಿಸಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ