
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಸಾಹಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಕನ್ನಡ ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದ್ದ ಟಾಲಿವುಡ್ ಹಿರಿಯ ನಟ ವಿಜಯ್ ರಂಗರಾಜು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.
ಸಂದರ್ಶನವೊಂದರಲ್ಲಿ ನಟ ವಿಷ್ಣು ವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಜಯ್ ರಂಗರಾಜ್, ಹತ್ತು ವರ್ಷಗಳ ಹಿಂದೆ ತಾನು ಅವರ ಕಾಲರ್ ಹಿಡಿದು ಜಗಳವಾಡಿದ್ದೆ ಎಂದು ಹೇಳಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಜಯ್ ರಂಗರಾಜ್ ಹೇಳಿಕೆಗೆ ಇಡೀ ಕನ್ನಡ ಚಿತ್ರರಂಗವೇ ಆಕ್ರೋಶ ವ್ಯಕ್ತಪಡಿಸಿತ್ತು. ನಟ ಜಗ್ಗೇಶ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ವಿಜಯ್ ರಂಗರಾಜ್ ಗೆ ಖಡಕ್ ಎಚ್ಚರಿಕೆ ನೀಡಿದ್ದರಲ್ಲದೇ, ಕ್ಷಮೆಯಾಚಿಸುವಂತೆ ಹೇಳಿದ್ದರು.
ತಮ್ಮ ಹೇಳಿಕೆ ತೀವ್ರ ವಿವಾದಕ್ಕೀಡಾದ ಬೆನ್ನಲ್ಲೇ ಇದೀಗ ನಟ ವಿಜಯ್ ರಂಗರಾಜು ಕನ್ನಡಿಗರ ಕ್ಷಮೆಯಾಚಿಸಿದ್ದು, ತಾನು ವಿಷ್ಣುದಾದಾ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಕೈಮುಗಿದು ಕಣ್ಣೀರು ಹಾಕಿ ಕ್ಷಮೆಯಾಚಿಸಿದ್ದಾರೆ.