ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿ ಸ್ಥಳಾಂತರದಿಂದ ಅಭಿವೃದ್ಧಿಯಾಗುತ್ತದೆ ಎಂಬುದು ತಪ್ಪು ಎಂದ ಬಿಜೆಪಿ ವಕ್ತಾರರ ಹೇಳಿಕೆಗೆ ಕನ್ನಡ ಪರ ಸಂಘಟನೆಗಳ ಆಕ್ರೋಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸುವುದರಿಂದ ಅಭಿವೃದ್ಧಿ ಆಗುತ್ತದೆ ಎಂಬುದು ತಪ್ಪು ಎಂದ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ ಅವರ ಹೇಳಿಕೆಯನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
ಬೆಳಗಾವಿಯಲ್ಲಿ ಬಿಜೆಪಿ ರಾಜ್ಶ ವಕ್ತಾರ ಮಹೇಶ ಅವರು ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸುವುದರಿಂದ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗುತ್ತದೆ ಎಂಬ ಭಾವನೆ ತಪ್ಪು ಎಂದು ಹೇಳಿಕೆ ನೀಡಿದ್ದರು.
ಕಚೇರಿ ಸ್ಥಳಾಂತರದಿಂದ ಅಭಿವೃದ್ಧಿ ಆಗುವುದಿಲ್ಲ ಎಂದ ಬಿಜೆಪಿ ವಕ್ತಾರರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಅವರು, ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನ ಪ್ರಮುಖ ಕಚೇರಿಗಳು ಸ್ಥಳಾಂತರವಾಗಬೇಕು ಎಂದು ಈ ಭಾಗದ ಕನ್ನಡಿಗರು ಹೋರಾಟ ನಡೆಸುತ್ತ ಬಂದಿದ್ದಾರೆ. ಇಂಥ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರರು ಇಂಥ ಹೇಳಿಕೆ ನೀಡುರುವುದು ಗಡಿ ಭಾಗದ ಕನ್ನಡಿಗರಿಗೆ ಮಾಡಿದ ಅವಮಾನ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ರಾಜ್ಯ ವಕ್ತಾರರ ಈ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಾಗಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಒಪ್ಪುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿ. ಕಾರಣ ಸರಕಾರ ಒಂದು ಕಡೆ, ಬಿಜೆಪಿ ಒಂದು ಕಡೆ ಆಗುವುದು ಸರಿಯಲ್ಲ. ಈ ರೀತಿಯ ಹೇಳಿಕೆ ನೀಡಿದ ಬಿಜೆಪಿ ವಕ್ತಾರರು ಕೂಡಲೆ ಕನ್ನಡಿಗರ ಕ್ಷಮೆ ಕೇಳಲಿ ಎಂದು ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗಾನಟ್ಟಿ ಸೇರಿದಂತೆ ಹಲವು ಕನ್ನಡ ಪರ ಹೋರಾಟಗಾರರು ಎಂ.ಜಿ.ಮಹೇಶ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಗರ್ಭಪಾತದ ಮಾತ್ರೆ ಸೇವಿಸಿ ಸಾವು ಕಂಡ ಬಾಲಕಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ