ಆಚಾರ್ಯ ಶ್ರೀ ಕಾಮಕುಮಾರನಂದಿ ಹತ್ಯೆ: ಜೈನ ಸಮಾಜದ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ ನಂದಿಪರ್ವತ ಆಶ್ರಮದ ಆಚಾರ್ಯ ಶ್ರೀ ಕಾಮಕುಮಾರನಂದಿ ಹತ್ಯೆ ನಡೆದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯ ಸುವರ್ಣಸೌಧ ಎದುರು ಬಾಲಾಚಾರ್ಯ ಶ್ರೀ.೧೦೮ ಸಿದ್ದಸೇನ ಮುನಿಗಳ ನೇತೃತ್ವದಲ್ಲಿ ಜೈನ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಜೈನ ಮುನಿಗಳಿಗೆ ರಕ್ಷಣೆ ನೀಡಬೇಕು ಹಾಗೂ ಹತ್ಯೆ ಮಾಡಿದ ವ್ಯಕ್ತಿಗಳಿಗೆ ಶೀಕ್ಷೆಯಾಗಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ರವಿರಾಜ ಪಾಟೀಲ ಅವರು, ಸ್ವಾಮೀಜಿಗಳ ಹತ್ಯೆ ಇದೊಂದು ಅನಾಗರಿಕತೆ ಹತ್ಯೆಯಾಗಿದೆ. ಮುನಷ್ಯತ್ವವಿಲ್ಲದ ವ್ಯಕ್ತಿ ಈ ರೀತಿ ಕೃತ್ಯ ಎಸಗಲು ಸಾಧ್ಯ. ಈ ಘಟನೆಯನ್ನು ಜೈನ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಜೈನ ಮುನಿಗಳು ಸರ್ವಸ್ವವನ್ನು ತ್ಯಾಗ ಮಾಡಿ ಮುನಿಗಳಾಗಿರುತ್ತಾರೆ. ಅವರಿಗೆ ಯಾವುದೇ ಮೋಹ ಇರುವುದಿಲ್ಲ. ಇಂತಹ ತ್ಯಾಗಿಗಳ ಹತ್ಯೆ ಮಾಡಿರುವುದು ಜೈನ ಸಮಾಜಕ್ಕೆ ಘಾಸಿಯನ್ನುಂಟು ಮಾಡಿದೆ. ಒಂದು ಸಣ್ಣ ಇರುವೆಗೂ ಕೆಟ್ಟದನ್ನು ಬಯಸದ ಮುನಿಗಳು ಯಾರಿಗೂ ಕೆಡು ಬಯಸಲಾರರು. ಆದರೆ ಇಂತಹ ತ್ಯಾಗಿಗಳ ಹತ್ಯೆ ಮಾಡಿರುವುದು ಖಂಡನೀಯ ಎಂದು ಅವರು ಹೇಳಿದರು.
ಬಾಲಾಚಾರ್ಯ ಶ್ರೀ.೧೦೮ ಸಿದ್ದಸೇನ ಮುನಿಗಳು ಮಾತನಾಡಿ, ಈ ಪ್ರತಿಭಟನೆ ಯಾವುದೆ ಪಕ್ಷ, ಯಾವುದೆ ಸರಕಾರದ ವಿರುದ್ದ ಅಲ್ಲ. ಜೈನ ಮುನಿಗಳ ಹತ್ಯೆಯಿಂದಾಗಿ ಇಂದು ಜೈನ ಮುನಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದೆ ರೀತಿ ಮುಂದುವರೆದರೆ ಜೈನ ಮುನಿಗಳಿಗೆ ಉಳಿಗಾಲವಿಲ್ಲ. ಹಾಗಾಗಿ ಸರಕಾರ ಜೈನ ತೀರ್ಥಕ್ಷೇತ್ರಗಳು ಮತ್ತು ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಬೇಕೆಂದು ಅವರು ಆಗ್ರಹಿಸಿದರು.
ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಜೈನ ಮುನಿಗಳು ಕೇವಲ ಧರ್ಮ ಪ್ರಚಾರ, ಧರ್ಮ ಸಭೆಗಳನ್ನು ನಡೆಸುತ್ತಾರೆ. ಆದರೆ ಯಾವುದೇ ರೀತಿಯ ಹಣದ ವ್ಯವಹಾರ ಮಾಡುವುದಿಲ್ಲ. ಪೋಲಿಸ್ ಇಲಾಖೆಯವರು ಹಣದ ವ್ಯವಹಾರದಲ್ಲಿ ಕೊಲೆಯಾಗಿದೆ ಎಂದು ಹೇಳುವ ಮೂಲಕ ಜೈನ ಸಮಾಜಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುವಂತಿದೆ. ಇದಕ್ಕೆ ಪೋಲಿಸ್ ಇಲಾಖೆ ಮೇಲೆ ಒತ್ತಡ ಇದ್ದಹಾಗೆ ಕಾಣುತ್ತದೆ. ಆದ್ದರಿಂದ ಈ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅನೇಕ ಹಿರಿಯರು ಮಾತನಾಡಿದರು. ಹಲಗಾ, ಬಸ್ತವಾಡ, ಅಲಾರವಾಡ, ಬೆಳಗಾವಿ ಸೇರಿದಂತೆ ಸುಮಾರು ೨ ಸಾವಿರಕ್ಕೂ ಹೆಚ್ಚು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ