
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ತನ್ನ ಮಗನನ್ನು ಕೊಂದಿದ್ದಾರೆಂದು ತಪ್ಪು ತಿಳಿದು ವ್ಯಕ್ತಿಯೊಬ್ಬನ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದ ಮಹಿಳೆಗೆ ಬೆಳಗಾವಿಯ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಮೂಲತಃ ಬೆಳಗಾವಿ ತಾಲೂಕಿನ ಸೋನಟ್ಟಿಯ ಹಾಲಿ ಕಾಕತಿ ಲಕ್ಷ್ಮೀ ನಗರ ನಿವಾಸಿ ಈರವ್ವಾ ಸಿದ್ದಪ್ಪ ಮುಚ್ಚಂಡಿ ಶಿಕ್ಷೆಗೀಡಾದ ಆರೋಪಿ ಮಹಿಳೆ.
ಆರೋಪಿಯ ಪುತ್ರ 2017ರಲ್ಲಿ ಕಳ್ಳಬಟ್ಟಿ ಸಾರಾಯಿಯನ್ನು ಸೋನಟ್ಟಿ ಗ್ರಾಮದಿಂದ ದೇವಗಿರಿ ಗ್ರಾಮಕ್ಕೆ ಮೊಟರ್‍ಸೈಕಲ್ ಮೇಲೆ ಸಾಗಿಸುತ್ತಿದ್ದಾಗ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ.
ಆದರೆ ಆರೋಪಿ ಈರವ್ವ ತನ್ನ ಮಗನನ್ನು ಸೋನಟ್ಟಿಯ ಸಿದ್ದನಾಥ ರಾಜಕಟ್ಟಿ ಮತ್ತು ಅವರ ಸಹೋದರ ಶಾನೂರು ರಾಜಕಟ್ಟಿ ಸೇರಿ ಕೊಲೆ ಮಾಡಿದ್ದಾಳೆ ಎಂದು ಭಾವಿಸಿದ್ದಳು. ಅದೇ ದ್ವೇಷದಿಂದ ಶಾನೂರು ರಾಜಕಟ್ಟಿಯ ಕುತ್ತಿಗೆಗೆ ಇರಿದಿದ್ದಳು.
ಬೈಕ್ ಹಿಂಬದಿಗೇ ಕುಳಿತಿದ್ದಳು
ಶಾನೂರು ರಾಜಕಟ್ಟಿಯನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ ಈರವ್ವ 2019ರ ನವೆಂಬರ್ 22ರಂದು ಶಾನೂರು ರಾಜಕಟ್ಟಿ ಚಲಾಯಿಸುತ್ತಿದ್ದ ಬೈಕ್‍ನ ಹಿಂಬದಿಗೆ ಕುಳಿತು ಸಾಗಿದ್ದಳು.
ಬಳಿಕ ತನ್ನಲ್ಲಿದ್ದ ಚಾಕುವಿನಿಂದ ಶಾನೂರು ರಾಜಕಟ್ಟಿಯ ಕುತ್ತಿಗೆಗೆ ಇರಿದಿದ್ದಳು. ಆರೋಪಿತಳ ವಿರುದ್ಧ ಕೊಲೆ ಯತ್ನದ ದೂರು ಐಪಿಸಿ ಕಲಂ 326, 307ರ ಅಡಿ ಪ್ರಕರಣ ದಾಖಲಾಗಿತ್ತು. ಮುಖ್ಯ ಪೇದೆ ಎ.ಬಿ. ಕುಂಡೆದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಗುರುರಾಜ ಗೋಪಾಲಾಚಾರ್ಯ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣವನ್ನು ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬಿ.ಎಸ್. ಕೂಗುನವರ ವಾದ ಮಂಡಿಸಿದ್ದರು.
*ಇಬ್ಬರು ಖತರ್ನಾಕ್ ಕಳ್ಳರನ್ನು ಹೆಡೆಮುರಿಕಟ್ಟಿದ ಬೆಳಗಾವಿ ಪೊಲೀಸರು*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ