ಪ್ರಗತಿವಾಹಿನಿ ಸುದ್ದಿ, ಅಥಣಿ – ಉಪಚುಣಾವಣೆಯ ಮುಹೂರ್ತವನ್ನು ಫಿಕ್ಸ್ ಮಾಡಿ ಚುಣಾವಣಾ ಆಯೋಗ ನೀತಿಸಂಹಿತೆಯನ್ನು ಜಾರಿಗೊಳಿಸಿದೆ. ಕ್ಷೇತ್ರದಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಕುತೂಹಲ ಮನೆ ಮಾಡಿದೆ. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದಾಗಿ ಇಷ್ಟು ಬೇಗ ಚುಣಾವಣೆ ಘೋಷಣೆಯಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಅನರ್ಹತೆಯ ಪ್ರಕರಣ ಸುಪ್ರೀಂಕೋರ್ಟನಲ್ಲಿ ಇತ್ಯರ್ಥವಾಗುವವರೆಗೂ ಚುನಾವಣೆ ನಡೆಯುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಒಂದೆಡೆ ರಾಜಕೀಯ ಪಕ್ಷಗಳು, ಇನ್ನೊಂದೆಡೆ ಅಭ್ಯರ್ಥಿಗಳು ಅನಿವಾರ್ಯವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ. ಉಪಚುನಾವಣಾ ಸಿದ್ದತೆಗಳು ಗರಿಗೆದರಲಾರಂಭಿಸಿವೆ. ಅದಕ್ಕೆ ಪೂರಕವೆಂಬಂತೆ ಸೋಮವಾರ ಅಥಣಿಯಲ್ಲಿ 4 ಜನ ಕಾಂಗ್ರೇಸ್ ಅಭ್ಯರ್ಥಿಗಳಿಂದ ನಾಮಪತ್ರವೂ ಸಲ್ಲಿಕೆಯಾಗಿದೆ.
ಅಥಣಿ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೨,೧೭,೯೭೪ ಇದರಲ್ಲಿ ೧,೧೨,೧೭೬ ಪುರುಷರು, ೧,೦೫,೨೯೬ ಮಹಿಳಾ ಮತದಾರರು ಮತ್ತು ಇಬ್ಬರು ಇತರರು ಇದ್ದಾರೆ, ಅಥಣಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೆಲ್ಲ ಪೂರ್ವ ನಿಗದಿತ ಎಲ್ಲ ಕೆಲಸಗಳನ್ನು ಬದಿಗೊತ್ತಿ ಚುನಾವಣೆ ಸಿದ್ದತೆಗೆ ತೊಡಗಿದ್ದಾರೆ. ಬಿಜೆಪಿ ಕಾಂಗ್ರೇಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರಲ್ಲಿ ತೊಡಗಿದ್ದಾರೆ.
ಕಾಂಗ್ರೇಸ್ ನಲ್ಲಿ ಬಂಡಾಯ ನಿಶ್ಚಿತ-
ಹಲವಾರು ದಿನಗಳಿಂದ ಅಥಣಿಯಲ್ಲಿ ಕಾಂಗ್ರೇಸ್ ನಲ್ಲಿ ಹೊರಗಿನವರು ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿ ಇದೆ. ಒಂದು ವೇಳೆ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದರೆ ಬಂಡಾಯವೇಳುವ ಸ್ಪಷ್ಟಲಕ್ಷಣಗಳು ಕ್ಷೇತ್ರದಲ್ಲಿ ಗೋಚರಿಸುತ್ತಿವೆ. ಹಲವಾರು ವರ್ಷಗಳಿಂದ ಹೈಕಮಾಂಡ್ ಟೀಕಟ್ ನಿಡಿದವರಿಗೆ ಸೇವೆ ಮಾಡುತ್ತಾ ಬಂದಿರುವ ನಮಗೆ ಯಾವಾಗ ಅವಕಾಶ ಸಿಗುವುದು ಎಂದು ಸ್ಥಳೀಯ ನಾಯಕರ ಪ್ರಶ್ನೆ? ಒಂದು ವೇಳೆ ಹೊರಗಿನವರಿಗೆ ಸಿಕ್ಕರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಥಿತಿಯಾಗಿದೆ. ಹಾಗಾಗ್ಯೂ ಸೋಮವಾರ ಕಾಂಗ್ರೇಸ್ ಪಕ್ಷದ ವತಿಯಿಂದ ಸಲ್ಲಿಕೆಯಾದ ನಾಲ್ಕು ನಾಮಪತ್ರಗಳನ್ನು ಅವಲೋಕಿಸಿದಾಗ ಬಂಡಾಯದ ಗುಮಾನಿ ಎಲ್ಲರಲ್ಲಿ ಮನೆಮಾಡಿದೆ.
ಗರಿಗೆದರಿದ ಚಟುವಟಿಕೆ-
ಬಲ್ಲ ಮಾಹಿತಿ ಪ್ರಕಾರವಾಗಿ ಕೆಪಿಸಿಸಿ ಆಜ್ಞೆಯಂತೆ ಈಗಾಗಲೇ ನಾಲ್ಕು ಜನ ಕಾಂಗ್ರೇಸ್ ಮುಖಂಡರಾದ ಮಾಜಿ ಶಾಸಕ ಷಹಜಹಾನ ಡೊಂಗರಗಾವ, ಗಜಾನನ ಮಂಗಸೂಳಿ, ಸುರೇಶಗೌಡ ಪಾಟೀಲ, ಸತ್ಯಪ್ಪಾ ಬಾಗೆನ್ನವರ ಅವರು ಪಕ್ಷದ ವತಿಯಿಂದ ನಾಮಪತ್ರವನ್ನು ಸಲ್ಲಿಸಿದ್ದು, ಇನ್ನೂ ಮೂರರಿಂದ ನಾಲ್ಕು ಜನ ನಾಮಪತ್ರವನ್ನು ಸಲ್ಲಿಸಲು ಕಾತುರರಾಗಿದ್ದಾರೆ. ಅದರಲ್ಲಿ ಕಾಂಗ್ರೇಸ್ ನ ಪ್ರಭಾವಿ ಮುಖಂಡರ ಕೃಪೆಗೆ ಪಾತ್ರರಾಗಿರುವ ಮತ್ತು ಈಗಾಗಲೇ ಒಂದು ಸಲ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಹಾಗೂ ಇದೀಗ ತಮ್ಮ ಪತ್ನಿಯನ್ನು ಜಿ.ಪಂ ಸದಸ್ಯೆಯನ್ನಾಗಿ ಮಾಡಿದ ಬಸವರಾಜ ಬುಟಾಳೆ ಅವರು ಈಗಾಗಲೇ ನನಗೆ ಟಿಕೇಟ್ ಖಚಿತವಾಗಿ ಸಿಗುತ್ತದೆ ಎಂದು ಭರ್ಜರಿ ತಯಾರಿ ಆರಂಭಿಸಿದ್ದಾರೆ.
ಹೋದ ಚುನಾವಣೆಯಲ್ಲೂ ಆಕಾಂಕ್ಷಿಯಾಗಿದ್ದ ಅವರು ಕುಮಠಳ್ಳಿ ಪರವಾಗಿ ಕೆಲಸ ಮಾಡಿದ್ದರು. ಪಕ್ಷದ ವರಿಷ್ಠರ ಬಳಿ ಈಗಾಗಲೇ ವಿಷಯ ಪ್ರಸ್ತಾಪಿಸಿದ್ದೇನೆ. ಉಪಚುನಾವಣೆ ಎದುರಾದರೆ ನನಗೇ ಟಿಕೆಟ್ ಕೊಡಬೇಕು ಎಂದು ಕೇಳಿದ್ದೇನೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಇನ್ನಿತರ ಕಾಂಗ್ರೇಸಿನ ಮುಖಂಡ ಹಾಗೂ ಪ್ರಬಲ ಸಮುದಾಯದ ಧರೆಪ್ಪ ಠಕ್ಕನ್ನವರ, ಶಿವಾನಂದ ಗುಡ್ಡಾಪೂರ, ನಿಶಾಂತ ದಳವಾಯಿ ಅವರೂ ಕೂಡ ರೇಸಿನಲ್ಲಿದ್ದು ಟಿಕೇಟ್ ಗಾಗಿ ಕಸರತ್ತು ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಗೊಂದಲದ ಗೂಡಾದ ಬಿಜೆಪಿ ಟಿಕೇಟ್-
ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರ ಜೊತೆಗೂಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹೇಶ ಕುಮಠಳ್ಳಿ ಅವರಿಗೆ ರಮೇಶ್ ಜಾರಕಿಹೊಳಿ ಅವರ ಪ್ರಭಾವದಿಂದಾಗಿ ಬಿಜೆಪಿ ಟಿಕೇಟ್ ಫಿಕ್ಸ್ ಆಗುತ್ತದೆ ಎನ್ನಲಾಗುತ್ತಿದ್ದು ಒಂದು ವೇಳೆ ಕುಮಠಳ್ಳಿ ಅವರಿಗೆ ಬಿಜೆಪಿ ಟಿಕೇಟ್ ಸಿಕ್ಕರೆ ಇತ್ತ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಕೈ ಟಿಕೇಟ್ ತಪ್ಪುತ್ತದೆ. ಇದಕ್ಕೆ ಪೂರಕವೆಂಬಂತೆ ಲಕ್ಷ್ಮಣ ಸವದಿ ಅವರು ಹೈ ಕಮಾಂಡ್ ಆದೇಶದ ಪ್ರಕಾರ ಮಹಾರಾಷ್ಟ್ರ ರಾಜ್ಯದ ಚುನಾವಣೆಯ ಉಸ್ತುವಾರಿಯ ಜವಾಬ್ದಾರಿ ಹೊತ್ತಿದ್ದಾರೆ. ಅವರು ಅತ್ತ ಕಡೆಗೆ ಹೋಗಲಿದ್ದು ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಮಠಳ್ಳಿ ಅವರೇ ಸ್ಪರ್ಧಿಸುತ್ತಾರೆ ಎನ್ನುವುದು ರಾಜಕೀಯ ಲೆಕ್ಕಾಚಾರವಾಗಿದೆ. ಒಂದು ವೇಳೆ ಮಹೇಶ ಕುಮಠಳ್ಳಿ ಅವರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ಅವರ ಸಹೋದರನಾದ ವೈದ್ಯಕೀಯ ವೃತ್ತಿಯಲ್ಲಿರುವ ಡಾ.ಪ್ರಕಾಶ ಕುಮಠಳ್ಳಿ ಅವರು ಸ್ಪರ್ಧಿಸಲು ತಯಾರಾಗಿದ್ದಾರೆ ಎನ್ನಲಾಗುತ್ತಿದೆ.
ಚುರುಕುಗೊಳ್ಳುತ್ತಿರುವ ಜೆಡಿಎಸ್-
ಇತ್ತ ಕಡೆಗೆ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದರೆ ಅತ್ತ ಕಡೆ ಜೆಡಿಎಸ್ ಕಾದುನೋಡಿ ಅಭ್ಯರ್ಥಿಗಳನ್ನು ಆಯ್ಕೆಮಾಡುವ ತಂತ್ರವನ್ನು ಅನುಸರಿಸುತ್ತಿದೆ. ಇತ್ತ ಮುಖಂಡರಾದ ಶ್ರೀಶೈಲ ಹಳ್ಳದಮಳ ಅವರು ದಿನಾಂಕ ೨೪ ರಂದು ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ, ಮಾಜಿ ಸಚಿವ ಬಸವರಾಜ ಹೊರಟ್ಟಿ ಹಾಗೂ ಮಾಜಿ ಶಾಸಕ ಕೋನರೆಡ್ಡಿ ಅವರನ್ನು ಅಥಣಿಗೆ ಕರಿಸಿ ತಮ್ಮ ಶಕ್ತಿಪ್ರದರ್ಶನ ಮಾಡಿ ಟಿಕೇಟ್ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ.
ಇವರಿಗೆ ಬೆಂಬಲವಾಗಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಪರಭವಗೊಂಡಿದ್ದ ಗಿರೀಶ ಬುಟಾಳಿ ಅವರೂ ಇದ್ದಾರೆ. ಇವರಲ್ಲದೆ ಲಕ್ಕಪ್ಪ ಮುಡಸಿ, ವಿಜಯ ನೇಮಗೌಡ, ಅಣ್ಣಾರಾಯ ಹಾಲಳ್ಳಿ, ರವಿ ಹಂಜಿ ಅವರೂ ಕೂಡ ಕಸರತ್ತು ನಡೆಸುತ್ತಿದ್ದಾರೆ.
ಇವೆಲ್ಲವುಗಳ ನಡುವೆ, ಮೊದಲೇ ತೀವ್ರ ನೆರೆಯಿಂದಾಗಿ ತತ್ತರಿಸಿದ ಅಥಣಿ ಜನತೆಗೆ ಮೊನ್ನೆಯ ಚುನಾವಣೆಯ ಕಾವು ಮಾಸುವ ಮುನ್ನವೇ ಮತ್ತೊಂದು ಉಪಚುನಾವಣೆಗೆ ಸಿದ್ದವಾಗುತ್ತಿರುವುದು ಸಂತ್ರಸ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ಏನೆ ಇರಲಿ, ಯಾರೆ ಬರಲಿ, ಯಾರೇ ಆಯ್ಕೆಯಾಗಲಿ ಸಂತ್ರಸ್ತರ ಸಮಸ್ಯೆ ನೀಗಿಸುವತ್ತ ಗಮನ ಹರಿಸಿ ಕಾರ್ಯೊನ್ಮುಖರಾಗಲಿ ಎಂದು ಮತದಾರ ಪ್ರಭುಗಳ ಆಶಯವಾಗಿದೆ.
ಚುನಾವಣೆಯೇ ರದ್ದಾಗುತ್ತಾ? -ಸುಪ್ರಿಂ ತೀರ್ಪು ಏಕೆ ಮಹತ್ವ ಗೊತ್ತಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ