ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚನ್ನಮ್ಮನ ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಸಿದ್ಧಾರೂಡ ಅಸೋಸಿಯೆಟ್ ಅಗ್ರಿಕಲ್ಟರ್ ಸರ್ವಿಸ್ ಸೆಂಟರ್ ಮೇಲೆ ಮೇ 12 ರಂದು ದಾಳಿ ನಡೆಸಿ, ರಸಗೊಬ್ಬರ ಜಪ್ತಿ ಮತ್ತು ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಿಲಾಗಿದೆ ಎಂದು ಜಾಗೃತ ಕೋಶದ ಜಂಟಿ ನಿರ್ದೇಶಕರಾದ ಜಿಲಾನಿ ಮೊಖಾಶಿ ಅವರು ತಿಳಿಸಿದ್ದಾರೆ.
ಮೇ.12 ರಂದು ಬೆಳಗಾವಿಯ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಜಾರಿದಳ, ಬೆಳಗಾವಿ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ, ಕಿತ್ತೂರು ತಂಡವು ದಾಳಿ ನಡೆಸಿದೆ.
ಕಿತ್ತೂರಿನ ಹೊಸ ಚನ್ನಾಪರ, ಗಿರಿಯಾಲ ರಸ್ತೆಯಲ್ಲಿರುವ ಮಲ್ಲಯ್ಯಾ ಬಸವಣ್ಣಯ್ಯಾ ಚಿಕ್ಕಮಠ,
ಸಾನಿ ಲಕ್ಕುಂಡಿಯವರ ಸಿದ್ಧಾರೂಡ ಅಸೋಸಿಯೆಟ್ ಅಗ್ರಿಕಲ್ಟರ್ ಸರ್ವಿಸ್ ಸೆಂಟರ್, ಇವರ ರಸಗೊಬ್ಬರ ಮಾರಾಟ ಸ್ಥಳ ಹಾಗೂ ಗೋದಾಮಿನ ಮೇಲೆ ದಾಳಿ ನಡೆಸಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಜೊತೆಗೆ ನಕಲಿ ಲಿಕ್ವಿಡ್ ಬಯೋ ಉತ್ಪನ್ನಗಳನ್ನು ಜಪ್ತಿ ಮಾಡಿ ಸ್ಥಳವನ್ನು ಸೀಲ್ ಮಾಡಲಾಗಿದೆ.
ಸ್ಥಳದಲ್ಲಿ ಬಯೋ ಡಿ.ಎ.ಪಿ. ಮತ್ತು ಬಯೋ ಯೂರಿಯಾ ಹೆಸರುಗಳನ್ನು ಚೀಲಗಳ ಮೇಲೆ ಮುದ್ರಿಸಿ ಜಿಪ್ಸಂ ಒಳಗೊಂಡ ಭೂ ಸುಧಾರಕಗಳನ್ನು ರಸಗೊಬ್ಬರಗಳೆಂದು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಕಲಿ ರಸಗೊಬ್ಬರಗಳನ್ನು ಈ ಮಾರಾಟಗಾರರು ಎ.ಎಸ್, ಗ್ರೂಪ್ ಧಾರವಾಡ ಇವರಿಂದ ಪಡೆದುಕೊಂಡು ಕಿತ್ತೂರಿನ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ.
ದಾಳಿ ಸಂದರ್ಭದಲ್ಲಿ ನಕಲಿ ಉತ್ಪನ್ನಗಳ ವಶ:
ದಾಳಿ ಸಂದರ್ಭದಲ್ಲಿ ಬಯೋ ಡಿ,ಎ.ಪಿ. 76 ಚೀಲ ಮತ್ತು ಬಯೋ ಯೂರಿಯಾ 03 ಚೀಲ ಜೊತೆಗೆ 14
ಬಯೋ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ವಶಪಡಿಸಿಕೊಂಡ ನಕಲಿ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಕೃಷಿ ಇಲಾಖೆಯಿಂದ ಪರವಾನಿಗೆಯನ್ನು ಪಡೆಯದೆ ನಕಲಿ ರಸಗೊಬ್ಬರ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಲ್ಲಯ್ಯಾ ಬಸವಣ್ಣಯ್ಯಾ ಚಿಕ್ಕಮಠ ಇವರ ಮೇಲೆ ರಸಗೊಬ್ಬರ ನಿಯಂತ್ರಣ ಆದೇಶದನ್ವಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೊಖಾಶಿ ಮಾಹಿತಿ ನೀಡಿದ್ದಾರೆ.
ರೈತರಲ್ಲಿ ಜಾಗೃತಿ ಅವಶ್ಯಕ :
ಹರಳು ರೂಪಕ್ಕೆ ಮಾರ್ಪಡಿಸಿರುವ ಜಿಪ್ಸಂನಂತಹ ಭೂ ಸುಧಾರಕಗಳು ನೋಡಲು ರಸಗೊಬ್ಬರಗಳಂತೆ ಇರುತ್ತವೆ. ಆದುದರಿಂದ ರೈತರು ಈ ರೀತಿಯ ನಕಲಿ ರಸಗೊಬ್ಬರಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಅವರು ಕಡಿಮೆ ದರಕ್ಕೆ ರಸಗೊಬ್ಬರಗಳನ್ನು ನೀಡುವುದಾಗಿ ಹೇಳುವ ಮಾತುಗಳಿಗೆ ಮರುಳಾಗಬಾರದು. ಅಧಿಕೃತ ಪರವಾನಿಗೆ ಹೊಂದಿರುವ ರಸಗೊಬ್ಬರಗಳ ಮಾರಾಟಗಾರಲ್ಲಿಯೇ ರಶೀದಿಯನ್ನು ಪಡೆದು ರಸಗೊಬ್ಬರಗಳನ್ನು ಖರೀದಿಸಬೇಕು ಎಂದು ಮೊಖಾಶಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸಣ್ಣ ವಾಹನಗಳು ಮತ್ತು ಲಾರಿಗಳಲ್ಲಿ ನಕಲಿ ರಸಗೊಬ್ಬರಗಳನ್ನು ತಂದು ಸ್ಥಳೀಯ ಎಜಂಟ್ ರುಗಳ ಮೂಲಕ ಮಾರಾಟ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಆದುದರಿಂದ ರೈತ ಬಾಂಧವರು ತಮ್ಮ ಗ್ರಾಮಗಳಲ್ಲಿ ಈ ರೀತಿಯ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅಥವಾ ಜಾಗೃತ ಕೋಶಕ್ಕೆ ಕೂಡಲೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ