*ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನ: ಡಬಲ್ ಮರ್ಡರ್ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ : ಜನವರಿ 7 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಬೆಂಕಿಗಾಹುತಿಯಾದ ಕಾರಿನಲ್ಲಿ ಎರಡು ಮೃತ ದೇಹಗಳು ಕಾರಿನೊಂದಿಗೆ ಸುಟ್ಟ ರೀತಿಯಲ್ಲಿ ಪತ್ತೆ ಆಗಿತ್ತು. ಆದರೆ ಇದು ಅಪಘಾತವಾಲ್ಲ ವ್ಯವಸ್ಥಿತ ಕೊಲೆ ಎಂಬುವುದು ದೃಢವಾಗಿದೆ.
ಅಪಘಾತದಲ್ಲಿ ಸಿದ್ದಾಪುರ ಮೂಲದ ಮಂಜುನಾಥ ಮತ್ತು ಚಂದ್ರಶೇಖರ್ ಎಂಬ ಮೀನಿನ ವ್ಯಾಪಾರಿಗಳು ಸಜೀವ ದಹನವಾಗಿದ್ದರು ಎಂದು ಬಿಂಬಿಸಲಾಗಿತ್ತು. ಆದರೆ ಇದು ಆಕಸ್ಮಿಕ ಅಪಘಾತವಲ್ಲ, ಹಣಕ್ಕಾಗಿ ನಡೆದ ಕೊಲೆ ಎಂಬುದು ಸಾಬೀತಾಗಿದೆ.
ಹಣಕ್ಕಾಗಿ ಜೊತೆಗಿದ್ದವರನ್ನೇ ಕೊಲೆ ಮಾಡಿದ ಪ್ರಮೋದ್ ನಾಯ್ಕ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕುಟುಂಬದವರು ಇದು ಆಕಸ್ಮಿಕ ಅಪಘಾತವಲ್ಲ ಕೊಲೆ ಎಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಹೊನ್ನಾವರ ಪೊಲೀಸರು ಪ್ರಮೋದ್ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದರು.
ಮೃತರಾದ ಚಂದ್ರಶೇಖರ ಮತ್ತು ಮಂಜುನಾಥ್ ಇಬ್ಬರು ಪ್ರಮೋದ್ ಜೊತೆಗೆ ಕೆಲಸ ಮಾಡುತಿದ್ದು ವ್ಯವಹಾರಕ್ಕಾಗಿ 5 ಲಕ್ಷ ಹಣ ಸಾಲ ಮಾಡಿದ್ದು ಹಾಗೂ ತಾನೇ ಮಾಡಿಸಿದ ಕೋಟಿ ಇನ್ಸುರೆನ್ಸ್ ಹಣಕ್ಕಾಗಿ ಇಬ್ಬರಿಗೂ ಮಧ್ಯದಲ್ಲಿ ಕೀಟನಾಶಕ ಸೇರಿಸಿ ಹತ್ಯೆ ಮಾಡಿ ತನ್ನ ಸ್ನೇಹಿತರ ಸಹಾಯದಿಂದ ಕಾರನ್ನ ಸೂಳೆ ಮುರ್ಕಿ ಕ್ರಾಸ್ ನಲ್ಲಿ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ


