Latest

*ಸ್ಪೀಕರ್ ಕಾಗೇರಿ, ಸಿಎಂ ಬೊಮ್ಮಾಯಿ ಗಮನಕ್ಕೆ: ಬೆಳಗಾವಿ- ಉಕ ಚರ್ಚೆ ಮೊದಲಿಗೆ ಬರಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭವ್ಯವಾದ ಸುವರ್ಣ ವಿಧಾನಸೌಧದ ನಿರ್ಮಾಣ, ವರ್ಷಕ್ಕೊಮ್ಮೆ ವಿಧಾನ ಮಂಡಳಗಳ ಅಧಿವೇಶನ ಇವುಗಳ ಮೂಲ ಉದ್ದೇಶವೇ ಈಗ ಜಿಜ್ಞಾಸೆಗೆ ಒಳಪಡುವಂತಾಗಿದೆ.

ನಿರಂತರ ಗಡಿ ವಿವಾದದಿಂದ ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದ್ದ ಬೆಳಗಾವಿ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಡೀ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ- ಜೆಡಿಎಸ್ ಸರಕಾರ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ಇಲ್ಲಿ ಅಧಿವೇಶನಗಳನ್ನು ನಡೆಸಲಾರಂಭಿಸಿತ್ತು. ಅದು ಈವರೆಗೆ ಈಡೇರಿದೆಯೇ, ಅಥವಾ ಇನ್ನಾದರೂ ಈಡೇರಿಸುವ ಭರವಸೆಗಳಿವೆಯೇ ಎಂಬ ಬಗ್ಗೆ ಗಂಭೀರ ಚಿಂತನೆಯ ಅಗತ್ಯತೆ ಹಾಗೆಯೇ ಮುಂದುವರಿದಿದೆ.

ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳ ಅವಧಿ ಹೊರತುಪಡಿಸಿ 13 ಚಳಿಗಾಲದ ಅಧಿವೇಶನಗಳು ಬೆಳಗಾವಿಯಲ್ಲೇ ನಡೆದಿದ್ದು ಇದೀಗ 14ನೇ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆದರೆ ಈ ಎಲ್ಲ ಅಧಿವೇಶನಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ಚರ್ಚೆ ಮಾತ್ರ ಕಡೆಗಣನೆಗೆ ಒಳಗಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ನಡೆಯುವ ಅಧಿವೇಶನಗಳಂತೆ ಇಲ್ಲಿಯೂ ನಡೆಯುತ್ತಿದ್ದು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಗಳು ಮಾತ್ರ ಕೊನೆಯ ದಿನ ಇರಿಸಲಾಗುತ್ತಿದೆ. ವಾಸ್ತವದಲ್ಲಿ ಇದು ಕೇವಲ ‘ಶಾಸ್ತ್ರ’ಕ್ಕೆಂಬಂತೆ ನಡೆಯುತ್ತಿರುವ ಬಗ್ಗೆ ಈ ಭಾಗದ ಜನತೆಯಲ್ಲಿ ಅಸಮಾಧಾನವಿದೆ.

ಈ ಕುರಿತು ಹಲವು ಸಂಘಟನೆಗಳು, ಪ್ರಮುಖರು ಆಕ್ಷೇಪಿಸುತ್ತಲೇ ಬಂದಿದ್ದಾರೆ. ಆದರಿದು ಸರಕಾರದ ಪಾಲಿಗೆ ಗಂಭೀರ ಎನಿಸಿಲ್ಲವೇನೋ, ಈ ಬಾರಿಯ ಅಧಿವೇಶನದಲ್ಲೂ ಅಂತಿಮ ದಿನವೇ ಉತ್ತರ ಕರ್ನಾಟಕದ ವಿಷಯಗಳು ಚರ್ಚೆಗಿರಿಸಲಾಗಿರುವುದು ಗಮನಾರ್ಹ.

ಹೀಗಾಗಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಒಂದು ಸರಕಾರಿ ಉತ್ಸವದಂತಾಗುತ್ತಿದೆಯೇ ಹೊರತು ಮೂಲೋದ್ದೇಶವೇ ವಿಫಲವಾಗುತ್ತಿರುವುದನ್ನು ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಿರುವ ಹಾಲಿ ಸರಕಾರವಾದರೂ ಗಮನಿಸಲೇಬೇಕಾಗಿದೆ.

ಅಧಿವೇಶನ ಬಂತೆಂದರೆ ಬೆಳಗಾವಿ ಮಹಾನಗರದಲ್ಲಿ ವರ್ಷವಿಡೀ ಹೊಂಡ, ಕುಳಿ ಬಿದ್ದ ರಸ್ತೆಗಳಿಗೆ ತೇಪೆ, ಬೆಳಗದ ದೀಪಗಳೆಲ್ಲ ಬೆಳಗಿ ಅಲಂಕಾರ ಭಾಗ್ಯ ಲಭಿಸುತ್ತದೆ. ವಿಐಪಿ, ವಿವಿಐಪಿಗಳ ಚಲನವಲನದ ಅಬ್ಬರವಿರುತ್ತದೆ. ಹೋಟೆಲ್, ಲಾಡ್ಜಿಂಗ್ ಗಳಿಗಿಷ್ಟು ಲಾಭದಾನ ಸಿಗುತ್ತದೆ. ಬಿಟ್ಟರೆ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಈವರೆಗಿನ ಅಧಿವೇಶನಗಳಿಂದ ದಕ್ಕಿದ್ದೇನು, ಬಿಟ್ಟಿದ್ದೇನು ಎಂಬ ಬಗ್ಗೆ ಅವಲೋಕಿಸಿದರೆ ಮತ್ತೆ ನಿರಾಸೆಯೇ ಕಾದಿರುತ್ತದೆ.

ಹೋರಾಟ, ಬಲಪ್ರದರ್ಶನಕ್ಕಷ್ಟೇ ವೇದಿಕೆ:

ಬೆಳಗಾವಿ ಅಧಿವೇಶನ ಬಂತೆಂದರೆ ವರ್ಷವಿಡೀ ಸುಪ್ತವಾಗಿದ್ದ ಜನಪರ ಹೋರಾಟಗಳು ಜೀವ ತಳೆಯುತ್ತವೆ. ಬೇಡಿಕೆ ಈಡೇರಿಕೆಗಾಗಿ ಸರಕಾರದ ಗಮನ ಸೆಳೆಯುವ ಕಸರತ್ತು ನಡೆಸಲು ವೇದಿಕೆ ತಯಾರಾಗುತ್ತದೆ. ಇದರ ಜತೆಜತೆಗೇ ರಾಜಕೀಯ, ಒಳರಾಜಕೀಯಗಳ ಡ್ರಾಮಾ, ಹೈಡ್ರಾಮಾಗಳ ಪ್ರದರ್ಶನಗಳೂ ನಡೆಯುತ್ತವೆ. ಕೆಲ ಹೋರಾಟಗಳಂತೂ ಅಧಿವೇಶನ ಕಾಲದ ಪರಂಪರೆಯಂತೆ ಪ್ರತಿವರ್ಷ ಅದೇ ಜನ, ಅದೇ ಬೇಡಿಕೆ, ಅದೇ ವೇದಿಕೆ ಮೂಲಕ ನಡೆಯುತ್ತಲೇ ಇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದ ಸವೆಸುವ ಬದಲು ಊರಂಗಳದಲ್ಲೇ ಸರಕಾರದ ಗಮನ ಸೆಳೆಯುವ ಭಾಗ್ಯ ಹೋರಾಟಗಾರರ ಪಾಲಿಗೆ ದಕ್ಕುವುದು ಬಿಟ್ಟರೆ ಅಧಿವೇಶನದಿಂದ ಸಾಧಿಸಿದ್ದೇನು? ಎಂಬ ಬಗ್ಗೆ ಆಲೋಚಿಸಿದಾಗ ಶೂನ್ಯವೇ ಕಣ್ಣುಕಟ್ಟುತ್ತದೆ.

ಅಧಿವೇಶನದ ಕೊನೆಯ ದಿನ ಹೊರತುಪಡಿಸಿ ಎಲ್ಲ ದಿನಗಳನ್ನು ರಾಜಕೀಯ ವಿಷಯಗಳ ಕಿತ್ತಾಟದಲ್ಲಿ ಮುಗಿಸಿ, ಕೊನೆಯ ದಿನ ಅನೇಕರ ಗೈರು ಹಾಜರಿಯಲ್ಲೇ ಕುಳಿತು ಒಂದೆರಡು ನೀರಾವರಿಯೋ ಇನ್ನಾವುದೋ ಯೋಜನೆಗಳನ್ನು ಘೋಷಿಸಿ ಉತ್ತರ ಕರ್ನಾಟಕದ ಮೂಗಿಗೆ ತುಪ್ಪ ಬಳಿಯುವುದಾದರೆ ಇಷ್ಟೊಂದು ಹಣ ವ್ಯಯಿಸಿ ಇಲ್ಲಿಯವರೆಗೆ ಬಂದು ಅಧಿವೇಶನ ನಡೆಸುವ ಅಗತ್ಯವಿದೆಯೇ, ಅದನ್ನು ಬೆಂಗಳೂರಿನ ವಿಧಾನಸೌಧದಲ್ಲೇ ಕೈಗೊಳ್ಳಬಹುದಲ್ಲವೇ ಎಂಬ ಜನಸಾಮಾನ್ಯರ ಪ್ರಶ್ನೆಯಲ್ಲೂ ತಥ್ಯ ಇಲ್ಲದಿಲ್ಲ.

ಅಂತಿಮ ದಿನದ ಚರ್ಚೆ ಎಷ್ಟು ಕಾರ್ಯಸಾಧು?

10 ಅಥವಾ ಅದಕ್ಕೂ ಹೆಚ್ಚು ದಿನ ನಡೆಯುವ ಬೆಳಗಾವಿ ಅಧಿವೇಶನದ ಅಂತಿಮ ದಿನ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆ ಎಷ್ಟರ ಮಟ್ಟಿಗೆ ಕಾರ್ಯಸಾಧು ಎಂಬ ಬಗ್ಗೆ ಸರಕಾರ ಒಮ್ಮೆ ಅವಲೋಕಿಸಬೇಕಿದೆ. ಅಧಿವೇಶನ ನಡೆಯುವ ಕಾಲಾವಧಿಯಲ್ಲಿ ಮನೆಮಠ ಬಿಟ್ಟು ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಎಲ್ಲರೂ ಸ್ವಸ್ಥಾನಕ್ಕೆ ತೆರಳಲು, ವಿಶ್ರಮಿಸಲು ಕಾತುರದಿಂದ ಕಾಯುವ ಸಮಯ ಅಧಿವೇಶನದ ಅಂತಿಮ ದಿನ. ಈ ಅಂತಿಮ ದಿನದ ಒಂದು ದಿನ ಮೊದಲೇ ಸುವರ್ಣ ವಿಧಾನಸೌಧದ ಎಲ್ಲ ಶಾಸಕರು, ಸಚಿವರ ಕೊಠಡಿಗಳ ಕಂಪ್ಯೂಟರ್ ಗಳು, ದಾಖಲೆಗಳು ಪ್ಯಾಕಪ್ ಆಗಿ ವಾಹನದ ಮೇಲೆ ಹೇರಿಕೊಂಡಿರುತ್ತವೆ.

ಶಾಸಕರು, ಅಧಿಕಾರಿಗಳು ಗೋವಾ, ಕೊಲ್ಲಾಪುರ ಮತ್ತಿತರೆಡೆ ಪ್ರವಾಸ ಹೊರಟು ರಿಲ್ಯಾಕ್ಸ್ ಮೂಡ್ ನತ್ತ ಹೊರಳಿರುತ್ತಾರೆ. ಅಬ್ಬರದಲ್ಲಿ ಅಧಿವೇಶನ ನಡೆದ ಸುವರ್ಣ ವಿಧಾನಸೌಧ ಅಕ್ಷರಶಃ ಭಣಗುಡುತ್ತಿರುತ್ತದೆ. ಈ ವೇಳೆ ಕಲಾಪದಲ್ಲಿ ಪಾಲ್ಗೊಳ್ಳುವ ಶಾಸಕರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ. ಒಂದು ಹಂತದಲ್ಲಿ ಕೊನೆಯ ದಿನದ ಕಲಾಪ ನಡೆಸಬೇಕೆಂಬ ಕಾರಣಕ್ಕೇ ನಡೆಸಬೇಕೆಂಬಂತೆ ಇರುತ್ತದೆ. ಇದು ಈವರೆಗೆ ಬೆಳಗಾವಿಯಲ್ಲಿ ನಡೆದ ಎಲ್ಲ ಅಧಿವೇಶನಗಳಲ್ಲಿ ಸಾಬೀತಾದ ವಿಷಯ.

ಕೊನೆಯ ದಿನ ಬೀಗರು ಬಿಟ್ಟುಹೋದ ಮದುವೆಮನೆಯಂತಾದ ಸುವರ್ಣ ವಿಧಾನಸೌಧದತ್ತ ಕಣ್ಣು ಹಾಯಿಸಿ ಉತ್ತರ ಕರ್ನಾಟಕಕ್ಕೆ ದಕ್ಕಿದ್ದೇನು? ಎಂದು ಆಲೋಚಿಸಿದರೆ ಬೇಸರದ ಭಾವನೆ ಬಿಟ್ಟರೆ ಬೇರೇನೂ ತೋಚದಂತಾಗಿರುತ್ತದೆ.

ಇನ್ನಾದರೂ ಸರಕಾರ ಚಿಂತಿಸಲಿ:

ಈಗಲೂ ಕಾಲ ಮಿಂಚಿಲ್ಲ. ಸರಕಾರ, ಪ್ರತಿಪಕ್ಷ ಈ ಬಗ್ಗೆ ಆಲೋಚಿಸಬೇಕಿದೆ. ಅಧಿವೇಶನದ ಇಡೀ ಚರ್ಚೆ ‘ಉತ್ತರ ಕರ್ನಾಟಕ ಅಭಿವೃದ್ಧಿ’ಯ ಮೂಲೋದ್ದೇಶದ ಈಡೇರಿಕೆ ನಿಟ್ಟಿನಲ್ಲಿ ನಡೆಸಲು ಸಂಕಲ್ಪಿಸಬೇಕಿದೆ. ಈ ನಿಟ್ಟಿನ ಜನತೆಯ ಆಶಯಕ್ಕೆ ಬೆಲೆ ನೀಡಬೇಕಿದೆ. ಅಂದಾಗಲೇ ಕೋಟ್ಯಾಂತರ ಹಣ ವ್ಯಯಿಸಿ ನಿರ್ಮಿಸಿದ ಸೌಧ, ಪ್ರತಿಬಾರಿ ಕೋಟ್ಯಾಂತರ ಹಣ ವ್ಯಯಿಸಿ ನಡೆಸುವ ಅಧಿವೇಶನ ಸಾರ್ಥಕವಾಗಲಿದೆ. ಇಲ್ಲವಾದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ನಿರುತ್ತರವಾಗುವ ಅಧಿವೇಶನಗಳು ಕೇವಲ ಕಣ್ಣೊರೆಸುವ ರಾಜಕೀಯ ಪರಂಪರೆಯಾಗಲಿದೆಯಷ್ಟೇ.

*ಅವರ ಭಾವನೆ ನನಗೆ ಅರ್ಥವಾಗಿದೆ ಎಂದ ಸಿಎಂ*

https://pragati.taskdun.com/cm-basavaraj-bommaik-s-eshwarapparamesh-jarakiholireaction/

*ವಿಧಾನ ಪರಿಷತ್ ಸಭಾಪತಿ ಚುನಾವಣೆ; ನಾಮಪತ್ರ ಸಲ್ಲಿಸಿದ ಹೊರಟ್ಟಿ*

https://pragati.taskdun.com/vidhanaparishathspeaker-electionbasavaraj-horatti/

*ಮಂತ್ರಿಗಿರಿಗಾಗಿ ಸಿಎಂ ಗೆ ಗಡುವು ನೀಡಿದ ಕೆ.ಎಸ್.ಈಶ್ವರಪ್ಪ; ಕುತೂಹಲ ಮೂಡಿಸಿದ ಮುಂದಿನ ನಡೆ*

https://pragati.taskdun.com/k-s-eshwarappapressmeetcabinet-expantioncm-basavaraj-bommai/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button