
ಪ್ರಗತಿವಾಹಿನಿ ಸುದ್ದಿ : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಆಟೋ ಡ್ರೈವರ್ ಗೆ ಚಪ್ಪಲಿಯಿಂದ ಹೊಡೆದು ಕನ್ನಡಿಗರನ್ನು ಕೆರಳಿಸಿದ ಹೊರರಾಜ್ಯದ ಮಹಿಳೆ ಇದೀಗ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ..
ದರ್ಪ ತೋರಿದ್ದ ಮಹಿಳೆಯ ವಿಚಾರಣೆ ಮಾಡಿದ್ದ ಬೆಳ್ಳಂದೂರು ಠಾಣೆ ಪೊಲೀಸರು ಮಹಿಳೆ ಫಂಕೂರಿಗೆ ಬುದ್ದಿವಾದ ಹೇಳಿದ್ದರು. ಇದೀಗ ತಪ್ಪು ಅರಿವಾಗಿ ಆಟೋ ಡ್ರೈವರ್ ಲೋಕೇಶ್ ಗೆ ಕ್ಷಮೆ ಕೋರಿದ್ದಾರೆ.
ಬಿಹಾರ ಮೂಲದ ಫಂಕೂರಿ ಮಿಶ್ರಾ ಆರೋಪಿತ ಮಹಿಳೆ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಬೆಳ್ಳಂದೂರು ಸೆಂಟ್ರಲ್ ಮಾಲ್ ಬಳಿ ಲೋಕೇಶ್ ಎಂಬ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ದರ್ಪತೋರಿದ್ದಳು.
ಫಂಕೂರಿ ಅವರ ಗುಂಡಾ ವರ್ತನೆಗೆ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸೆರೆಯಾಗಿದ್ದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಅವರನ್ನು ಪತ್ತೆ ಮಾಡಿ, ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಭಾನುವಾರ ಠಾಣೆಗೆ ಬಂದ ಅವರನ್ನು ಬಂಧಿಸಿ ವಿಚಾರಣೆ ನಡೆಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಫಂಕೂರಿ ಆಟೋ ಡ್ರೈವರ್ ಕಾಲು ಹಿಡಿದು ತಪ್ಪಾಯ್ತು ಕ್ಷಮಿಸಿ ಎಂದಿದ್ದಾರೆ.