*13 ವರ್ಷಗಳ ಬಳಿಕ ಆಟೋ ದರ ಹೆಚ್ಚಳ*: *1.8 ಕಿ.ಮೀ.ಗೆ 50ರೂ. ನಿಗದಿಗೊಳಿಸಿದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ಸರ್ಕಾರ ಬರೋಬ್ಬರಿ 13 ವರ್ಷಗಳ ಬಳಿಕ ರಾಜ್ಯಾದ್ಯಂತ ಆಟೋರಿಕ್ಷಾ ಪ್ರಯಾಣ ದರಗಳನ್ನು ಪರಿಷ್ಕರಿಸಿದೆ. ಹೊಸ ದರದ ಪ್ರಕಾರ, ಮೊದಲ 1.8 ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ₹50 ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಲೋಮೀಟರ್ಗೆ ಹೆಚ್ಚುವರಿಯಾಗಿ ₹25 ಪಾವತಿಸಬೇಕಾಗುತ್ತದೆ. ಈ ಪರಿಷ್ಕೃತ ದರಗಳು ಪ್ರಯಾಣಿಕರ ಜೇಬಿಗೆ ಹೊರೆ ತರಬಹುದೆಂಬ ಚರ್ಚೆ ಆರಂಭವಾಗಿದೆ.
1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಹೊಸ ದರ ವ್ಯವಸ್ಥೆಯ ಮೂಲಕ ಆಟೋ ಚಾಲಕರ ಹಿತಾಸಕ್ತಿಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಘಾಟ್ ಪ್ರದೇಶಗಳಲ್ಲಿನ ಪ್ರಯಾಣಕ್ಕೂ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಕನಿಷ್ಠ ದರಕ್ಕಿಂತ 1.2 ಪಟ್ಟು ಹೆಚ್ಚಳ ಮಾಡಲಾಗಿದ್ದು, ಘಾಟ್ ಪ್ರಯಾಣದ ಆರಂಭಿಕ ದರ ₹60 ಆಗಿದೆ. ನಂತರದ ಪ್ರತಿ ಕಿಲೋಮೀಟರ್ಗೆ ₹30 ಪಾವತಿಸಬೇಕಾಗುತ್ತದೆ.
ರಾತ್ರಿ ಪ್ರಯಾಣಕ್ಕೂ ಹೆಚ್ಚುವರಿ ದರ ಅನ್ವಯವಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಾಮಾನ್ಯ ದರಕ್ಕಿಂತ 1.5 ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ, ಪ್ರಯಾಣದ ವೇಳೆ ಕಾಯುವಿಕೆಗೆ ಪ್ರತಿ ನಿಮಿಷಕ್ಕೆ ₹1 ವೇಟಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ.
13 ವರ್ಷಗಳ ಬಳಿಕ ದರ ಪರಿಷ್ಕರಣೆ ನಡೆದಿರುವುದರಿಂದ ಆಟೋ ಚಾಲಕರಿಗೆ ಆರ್ಥಿಕವಾಗಿ ನೆರವಾಗುವ ನಿರೀಕ್ಷೆಯಿದೆ. ಆದರೆ, ಏಕಾಏಕಿ ದರ ಏರಿಕೆಯಾಗಿರುವುದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯೂ ಇದೆ. ಹೊಸ ದರಗಳು ಸಾರ್ವಜನಿಕರ ಪ್ರಯಾಣ ವೆಚ್ಚದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



