CrimeKannada NewsKarnataka NewsLatest

*ಅಂಜನಾದ್ರಿ ಬೆಟ್ಟದಲ್ಲಿ ಮತ್ತೆ ಜಟಾಪಟಿ*: *ವಿದ್ಯಾದಾಸ್ ಬಾಬಾ ಹಾಕಿದ್ದ ಬೀಗ ಒಡೆದು ಅಧಿಕಾರಿಗಳ ಕಾರ್ಯಾಚರಣೆ!*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆಯ ಗಂಗಾವತಿಯ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನದ ವಿಚಾರವಾಗಿ ಪ್ರಧಾನ ಅರ್ಚಕ ವಿದ್ಯಾದಾಸ್ ಬಾಬಾ ಮತ್ತು ಜಿಲ್ಲಾಡಳಿತದ ನಡುವಿನ ಸಂಘರ್ಷ ತೀವ್ರಗೊಂಡಿದೆ. ದೇವಸ್ಥಾನವನ್ನು ಮತ್ತೆ ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲು ಮುಂದಾದ ಅಧಿಕಾರಿಗಳು, ಬಾಬಾ ಹಾಕಿದ್ದ ಬೀಗಗಳನ್ನು ಒಡೆದು ಒಳಪ್ರವೇಶಿಸಿದ್ದಾರೆ. ಈ ಬೆಳವಣಿಗೆಯಿಂದ ದೇವಸ್ಥಾನದ ಆಡಳಿತದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಉಪವಿಭಾಗಾಧಿಕಾರಿ (ಎಸಿ), ತಹಸೀಲ್ದಾರ್ ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ದೇವಸ್ಥಾನದ ಎಂಟು ಕಚೇರಿಗಳಿಗೆ ಹಾಕಲಾಗಿದ್ದ ಬೀಗಗಳನ್ನು ಒಡೆದಿದ್ದಾರೆ. ಬೆಟ್ಟದಲ್ಲಿ ವಿದ್ಯಾದಾಸ್ ಬಾಬಾ ಅಳವಡಿಸಿದ್ದ ಟ್ರಸ್ಟ್‌ನ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಬಾಬಾ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನೂ ಹೊರಗೆ ಕಳುಹಿಸಿ, ಜಿಲ್ಲಾಡಳಿತದ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಎಸಿ ಸೂಚಿಸಿದ್ದಾರೆ.

ಜಿಲ್ಲಾಡಳಿತದ ಈ ಕ್ರಮಕ್ಕೆ ಪ್ರಧಾನ ಅರ್ಚಕ ವಿದ್ಯಾದಾಸ್ ಬಾಬಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ದೇವಸ್ಥಾನವನ್ನು ಸುಪರ್ದಿಗೆ ಪಡೆದುಕೊಂಡಿದ್ದೇನೆ. ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೊದಲು ನ್ಯಾಯಾಲಯದ ಆದೇಶವನ್ನು ತೋರಿಸಿ, ನಂತರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ವಿದ್ಯಾದಾಸ್ ಬಾಬಾ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿರುವ ಬಾಬಾ, ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಹನುಮ ಜನ್ಮಸ್ಥಳವೆಂದು ಪ್ರಸಿದ್ಧಿಯಾಗಿರುವ ಅಂಜನಾದ್ರಿ ದೇವಸ್ಥಾನದ ಆಡಳಿತದ ವಿಚಾರದಲ್ಲಿ ಮುಂದಿನ ಬೆಳವಣಿಗೆಗಳ ಕುರಿತು ಕುತೂಹಲ ಮೂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button