Kannada NewsKarnataka NewsLatest

ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಕುರಿತು ಮಕ್ಕಳಿಗೆ ಅರಿವು ಅಗತ್ಯ

 

 ಪ್ರಗತಿವಾಹಿನಿ ಸುದ್ದಿ, ನೇಸರಗಿ (ಬೈಲಹೊಂಗಲ):

ಜೀವನಾವಸ್ಥೆಯಲ್ಲಿ ಬರುವ ಅತ್ಯಂತ ಅಮೂಲ್ಯ ಹಾಗೂ ಮಹತ್ವದ ಘಟ್ಟ ಬಾಲ್ಯ.  ಅಂತಹ ಅಮೂಲ್ಯದ ಬೆಲೆಯನ್ನು ತಿಳಿದು ಸಮಸ್ಯೆಗೆ ಒಳಗಾಗದ ಹಾಗೆ ಇರಬೇಕು ಎಂದು ಸುರಕ್ಷಿತ ಗ್ರಾಮ ಕಾರ್ಯಕ್ರಮದ ರಾಜ್ಯ ಸಂಯೋಜಕ  ಮುನಿಚೌಡಪ್ಪಾ ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಯೋಜನೆ ಹಾಗೂ ಮೈ ಚಾಯ್ಸ್ ಫೌಂಡೇಶನ್ ಹೈದರಾಬಾದ್, ಆಪರೇಶನ್ ರೆಡ್ ಅಲರ್ಟ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಕಿಶೋರಿಯರಿಗೆ ಸಾಗಾಣಿಕೆ ತಡೆ ಕುರಿತು ಆತ್ಮ ಕೌಶಲ್ಯ ವೃದ್ಧಿಸುವ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಭಾರತದಲ್ಲಿ ಕಳ್ಳ ಸಾಗಾಣಿಕೆಗೆ ಒಳಗಾಗುವ ಮಕ್ಕಳ ಸರಾಸರಿ ವಯಸ್ಸು 12 ವರ್ಷ ಬಡತನ ಅನಕ್ಷರತೆ, ದುಶ್ಚಟಗಳಿಗೆ ಬಲಿಯಾಗಿ ಪಾಲಕರು ಮಕ್ಕಳನ್ನು ಮಾರಾಟದಂತಹ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಬಾಲ್ಯ ವಿವಾಹಕ್ಕೊಳಗಾದ ಅಪ್ರಾಪ್ತ ವಯಸ್ಕರು, ಬಾಲಕಾರ್ಮಿಕ, ಪೊಕ್ಸೊ ಕಾಯ್ದೆ, ಕಾನೂನಿನ ಸಂಘರ್ಷಕ್ಕೊಳಪಟ್ಟ ಮಕ್ಕಳಿಗೆ ಮುನರ್ವಸತಿ ಕಲ್ಪಿಸುವಂತಹ ಕಾರ್ಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ, ಆರೋಗ್ಯ, ಅನಾರೋಗ್ಯಗಳ ಭಿನ್ನತೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಉಜ್ವಲಾ ಯೋಜನೆಯ ಯೋಜನಾ ನಿರ್ದೇಶಕಿ ಸುರೇಖಾ ಪಾಟೀಲ ಮಾತನಾಡಿ, ಮಕ್ಕಳಲ್ಲಿ ಹೊಸ ಚಿಂತನೆ, ಮೌಲ್ಯ ತತ್ವಗಳನ್ನು ತುಂಬಿಸುವ ಶಿಕ್ಷಣ ನಮಗೆ ಬೇಕಾಗಿದೆ. ಉತ್ತಮ ಸಂಸ್ಕಾರ ಪ್ರೋತ್ಸಾಹ ಪ್ರತಿಭೆಗೆ ಅವಕಾಶ ದೊರೆತಲ್ಲಿ ಮಕ್ಕಳು ಸಮಸ್ಯೆಯಿಂದ ದೂರಾಗಬಲ್ಲರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯೋಪಾಧ್ಯಾಯ ಆರ್. ಸಿ ಯರಗಟ್ಟಿ ವಹಿಸಿದ್ದರು. ಸಂತೋಷ ಬಡಿಗೇರ ಪ್ರಾಸ್ತಾವಿವಾಗಿ ಮಾತನಾಡಿದರು, ಅನ್ನಪೂರ್ಣ ಬುಚಡಿ ನಿರೂಪಿಸಿದರು. ಎಸ್. ಬಿ ಬೇಟಗೇರಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button