ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಭರತೇಶ ಶಿಕ್ಷಣ ಸಂಸ್ಥೆಗಳ ಸುಮಾರು ೨೫೦೦ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬುಧವಾರ ಬೆಳಿಗ್ಗೆ ಕೋಟೆಯ ಆವರಣದಿಂದ ಪ್ಲಾಸ್ಟಿಕ್ ಬಳಕೆಯ ವಿರುದ್ದ ಜಾಗೃತಿ ರ‍್ಯಾಲಿಯನ್ನು ನಡೆಸಿದರು.
ಕೋಟೆ ಕ್ಯಾಂಪಸ್‌ನಿಂದ ಪ್ರಾರಂಭವಾದ ರ‍್ಯಾಲಿಯನ್ನು ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಗೋಪಾಲ್ ಕೃಷ್ಣನ್ ಮತ್ತು ಟಿಎ ೧೧೫ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿನಯ್ ಸದಾಶಿವನ್ ಮೊದಲಾದವರು ರ‍್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಯ್ ಪಾಟೀಲ, ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್ ಬಳಕೆಯ ನಿಷೇಧ ಕುರಿತು ಮಾಡಿದ ಬದ್ಧತೆಯನ್ನು ವಿವರಿಸಿದರು. ರಾಷ್ಟ್ರೀಯ ಹಿತಾಸಕ್ತಿಯ ಚಟುವಟಿಕೆಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಅನಿಲ ಬೆನಕೆ ಅವರು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸುವ ಉಪಕ್ರಮವನ್ನು ಶ್ಲಾಘಿಸಿದರು.
ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್‌ಗೆ ಭರತೇಶ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರಾಜೀವ್ ದೊಡ್ಡಣ್ಣವರ್ ಸಂಪೂರ್ಣ ಬೆಂಬಲ ನೀಡಿದರು. ಗೋಪಾಲ್ ಕೃಷ್ಣನ್ ಮತ್ತು ಕರ್ನಲ್ ಸದಾಶಿವನ್ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾತಿ ಜೋಗ್ ಕಾರ್ಯಕ್ರಮ ನಿರೂಪಿಸಿದರು.
ರ‍್ಯಾಲಿಯು ಸಿಬಿಟಿ, ಖಡೆ ಬಜಾರ್, ಮಾಳಿ ಗಲ್ಲಿ ಮತ್ತು ಕರ್ನಾಟಕ ಚೌಕ್ ಮೂಲಕ ಹಾದುಹೋಯಿತು. ಸಿಬಿಟಿ ಮತ್ತು ಕರ್ನಾಟಕ ಚೌಕ್‌ನಲ್ಲಿ ವಿದ್ಯಾರ್ಥಿಗಳು ಬೀದಿ ನಾಟಕಗಳನ್ನು ಪ್ರದರ್ಶಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ