*ಅಯೋಧ್ಯೆಯಲ್ಲಿ ಇಂದಿನಿಂದ ದೀಪೋತ್ಸವದ ಸಂಭ್ರಮ*: *ನ. 7ರಂದು 30 ಲಕ್ಷ ದೀಪಗಳ ಬೆಳಕು*

ಪ್ರಗತಿವಾಹಿನಿ ಸುದ್ದಿ: ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಮತ್ತೊಮ್ಮೆ ದೀಪಗಳ ಬೆಳಕಿನಲ್ಲಿ ಕಂಗೊಳಿಸಲು ಸಜ್ಜಾಗಿದೆ. ಸರಯೂ ನದಿ ತೀರದಿಂದ ಶ್ರೀರಾಮ ಜನ್ಮಭೂಮಿ ದೇವಾಲಯದವರೆಗೆ ಎಲ್ಲೆಡೆ ದೀಪಗಳ ಸಾಲು ಕಣ್ಮನ ಸೆಳೆಯಲಿದೆ. ಐದು ದಿನಗಳ ಅದ್ಧೂರಿ ದೀಪೋತ್ಸವಕ್ಕೆ ಇಂದಿನಿಂದ ಚಾಲನೆ ಸಿಗಲಿದ್ದು, ದೇಶ-ವಿದೇಶಗಳ ಕಲಾವಿದರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈ ಬಾರಿಯ ದೀಪೋತ್ಸವದಲ್ಲಿ ಐದು ದೇಶಗಳ ರಾಮಲೀಲಾ ತಂಡಗಳು ಪಾಲ್ಗೊಳ್ಳಲಿವೆ. ಶ್ರೀರಾಮನ ಜೀವನಗಾಥೆಯನ್ನು ರಾಮಲೀಲಾ ರೂಪದಲ್ಲಿ ಪ್ರದರ್ಶಿಸಲಿವೆ. ಇದರ ಜೊತೆಗೆ ವಿವಿಧ ರಾಜ್ಯಗಳ ಕಲಾವಿದರು ಜಾನಪದ ಕಲೆ, ನೃತ್ಯ, ಸಂಗೀತ ಮತ್ತು ಸಾಂಪ್ರದಾಯಿಕ ಉಡುಗೆಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸಲಿದ್ದಾರೆ.
ದೀಪೋತ್ಸವದ ಪ್ರಮುಖ ಕಾರ್ಯಕ್ರಮ ನವೆಂಬರ್ 7ರಂದು ನಡೆಯಲಿದೆ. ಅಂದು ರಾಮ್ ಕಿ ಪೈಡಿ ಪ್ರದೇಶದ 56 ಘಾಟ್ಗಳಲ್ಲಿ ಬರೋಬ್ಬರಿ 30 ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಅಯೋಧ್ಯೆಯಲ್ಲಿ ಮತ್ತೊಂದು ಅದ್ಧೂರಿ ದೀಪೋತ್ಸವಕ್ಕೆ ವೇದಿಕೆ ಸಿದ್ಧವಾಗಿದೆ.
ಇಂದಿನಿಂದಲೇ ಅಯೋಧ್ಯೆಯಲ್ಲಿ ಲೇಸರ್ ಶೋ, ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಶ್ರೀರಾಮ ಜನ್ಮಭೂಮಿ ದೇವಾಲಯದ ಆವರಣದ ಐದು ವಲಯಗಳಲ್ಲಿ ಸುಮಾರು ಒಂದು ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ ನಡೆದಿದೆ.
ಒಟ್ಟಿನಲ್ಲಿ, ಭಕ್ತಿ, ಸಂಸ್ಕೃತಿ ಮತ್ತು ಬೆಳಕಿನ ಸಮ್ಮಿಲನಕ್ಕೆ ಅಯೋಧ್ಯೆ ಸಜ್ಜಾಗಿದೆ. ಸರಯೂ ನದಿ ತೀರದಲ್ಲಿ ಲಕ್ಷಾಂತರ ದೀಪಗಳು ಬೆಳಗುವ ಕ್ಷಣಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.




