Karnataka NewsLatestNational

*ರಾಮ ಮಂದಿರ ಕಾಣಿಕೆ ಕದ್ದು ಗರ್ಲ್ ಫ್ರೆಂಡ್ ಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟಿದ್ದ ಆರೋಪಿ*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯಾ ರಾಮ ಮಂದಿರ ಕಾಣಿಕೆ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ದಿನಕ್ಕೊಂದು ಘಟನೆ ಬೆಳಕಿಗೆ ಬರುತ್ತಿದೆ. ಇದೀಗ ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್ ಶುಕ್ಲಾನ ಕರಾಳ ಮುಖ ಎಸ್ ಐಟಿ ತನಿಖೆಯಲ್ಲಿ ಬಯಲಾಗಿದೆ.

ಕೇವಲ 15 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಅವಿನಾಶ್ ಶುಕ್ಲಾ. ರಾಮನ ಹುಂಡಿ ಹಣ ಕಳ್ಳತನ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮೋಜು, ಮಸ್ತಿ ಮಾಡುತ್ತಿದ್ದ. ಅಲ್ಲದೇ ಲಕ್ಷ ಲಕ್ಷ ಹಣವನ್ನು ಗರ್ಲ್‌ಫ್ರೆಂಡ್‌ ಅಕೌಂಟ್‌ಗೆ ಹಾಕಿದ್ದ. ಭಕ್ತರ ಹಣದಲ್ಲೇ ದುಬಾರಿ ಬೆಲೆಯ ಐಫೋನ್ ಗಿಫ್ಟ್ ಕೊಟ್ಟಿದ್ದ. ಜೊತೆಗೆ ಕದ್ದ ಹಣದ ಸಹಾಯದಿಂದಲೇ ಹೊಸ ಮನೆ ಕಟ್ಟಿಸಿ, ಸ್ವಂತ ಕಾರನ್ನು ಕೂಡ ಖರೀದಿಸಿದ್ದ. ಯಾರಿಗೂ ಗೊತ್ತಾಗದಿರಲೆಂದು ತನ್ನ ಸಹೋದರ ಅಭಿಷೇಕ್ ಹೆಸರಿನಲ್ಲಿ ಕಾರನ್ನು ನೋಂದಣಿ ಮಾಡಿಸಿದ್ದ ಎನ್ನಲಾಗಿದೆ.

Home add -Advt

ಅವಿನಾಶ್ ಶುಕ್ಲಾನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದ ಎಸ್‌ಐಟಿ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಆತನ ಖಾತೆಯಲ್ಲಿದ್ದ ಹಣದಿಂದ ಇಷ್ಟೊಂದು ಐಷಾರಾಮಿ ಜೀವನ ಹೇಗೆ ಸಾಧ್ಯ ಎಂಬ ಸಂಶಯದ ಮೇಲೆ ತನಿಖೆ ನಡೆಸಿದಾಗ ಕಳ್ಳತನದ ಜಾಲ ಬೆಳಕಿಗೆ ಬಂದಿದೆ.

ಆರೋಪಿ ಕುಟುಂಬಸ್ಥರಿಗಾಗಿ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸುಮಾರು 19 ಲಕ್ಷ ರೂ.ಯನ್ನು ತನ್ನ ಕುಟುಂಬ ಮತ್ತು ಸ್ನೇಹಿತರಿಗಾಗಿ ಐಷಾರಾಮಿ ಜೀವನ ನಡೆಸಲು ಖರ್ಚು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತನ್ನ ಓರ್ವ ಸಹೋದರನ ಮದುವೆ ಸಂಭ್ರಮಕ್ಕಾಗಿ ಬರೋಬ್ಬರಿ 6 ಲಕ್ಷ ರೂ. ಹಾಗೂ ಇನ್ನೋರ್ವ ಸಹೋದರನಿಗೆ ಬರೋಬ್ಬರಿ 5-6 ಲಕ್ಷ ರೂ. ನಗದನ್ನು ಉಡುಗೊರೆಯಾಗಿ ನೀಡಿದ್ದ. ಸಣ್ಣ ಪುಟ್ಟ ಮೊತ್ತವನ್ನು ಇತರೆ ಪರಿಚಯಸ್ಥರಿಗೆ ಹಂಚಿದ್ದಾನೆ ಎನ್ನಲಾಗಿದೆ. ಇದಕ್ಕೂ ಮುನ್ನ ಪೊಲೀಸರು ಆರೋಪಿಯಿಂದ ಭಾರೀ ಪ್ರಮಾಣದ ಸ್ವತ್ತನ್ನು ಜಪ್ತಿ ಮಾಡಿದ್ದರು. 20.39 ಲಕ್ಷ ರೂ. ನಗದು, 1,121 ಯುಎಸ್ ಡಾಲರ್, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಸದ್ಯ ಹಣ ಎಲ್ಲಿಲ್ಲಿ, ಎಷ್ಟು ಖರ್ಚಾಗಿದೆ? ಯಾರಿಗೆ ವರ್ಗಾವಣೆಯಾಗಿದೆ? ಎನ್ನುವುದನ್ನು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

Related Articles

Back to top button