ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮಧ್ಯಾಹ್ನ ಶಿಲನ್ಯಾಸ ನೆರವೇರಲಿದೆ. ಈಗಾಗಲೇ ಶಿಲನ್ಯಾಸ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕದ ಹಲವು ಮಹನೀಯರನ್ನು ಆಹ್ವಾನಿಸಲಾಗಿದ್ದು, ಇದೀಗ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಅಯೋಧ್ಯೆಗೆ ತೆರಳುತ್ತಿದ್ದಾರೆ.
ಗುರುಪೀಠದಲ್ಲಿ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಮಸ್ತ ಭಾರತೀಯರ ಭಾವನೆಗಳ ಪ್ರತೀಕ. ರಾಮಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನಮಗೂ ಆಹ್ವಾನ ಬಂದಿದೆ. ಈ ಹಿನ್ನಲೆ ಇಂದು ಅಯೋಧ್ಯೆಗೆ ತೆರಳಲು ಸಕಲಸಿದ್ಧತೆಗಳಾಗಿವೆ. ಐತಿಹಾಸಿಕ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದು ಸಂತೋಷ ತಂದಿದೆ. ಇಂದು ಸಂಜೆ ಅಯೋಧ್ಯೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸಾಕ್ಷೀಕರಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದರು.
ರಾಮಮಂದಿರ ನಿರ್ಮಾಣದ ಈ ಸುವರ್ಣ ಸಮಯಕ್ಕೆ ದೇಶದ ಜನ ಕಾತುರರಾಗಿದ್ದಾರೆ. ಹೀಗಾಗಿ ರಾಮಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ. ರಾಮ ಮಂದಿರದ ಹೋರಾಟ ಹುಟ್ಟಿದ ಸಂದರ್ಭದಲ್ಲಿ ನಾವೇ ಹುಟ್ಟಿರಲಿಲ್ಲ ಆದರೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಾವುಗಳು ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ