ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಯೋಧ್ಯೆಯಲ್ಲಿ ಶಿವ ಮಂದಿರ ಸ್ಥಾಪನೆ ಮಾಡುವಂತೆ ಕರಡಿಗುದ್ದಿ ಕಾಟಾಪುರಿಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಶನಿವಾರ ಸಂಸದೆ ಮಂಗಳಾ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ಭಾರತ ದೇಶ ಆದ್ಯಾತ್ಮದ ತಾಣವಾಗಿದೆ. ಶರಣ ಸಂಪ್ರದಾಯ ಮನೆ ಮಾಡಿದೆ. ಪ್ರತಿಯೊಬ್ಬರ ಹೃದಯದಲ್ಲಿ ಭಕ್ತಿಯ ಸೆಲೆ ಅಡಗಿದೆ. ಶಿವ ಹಾಗೂ ರಾಮ ದೇವತೆಗಳಿಬ್ಬರೂ ಭಕ್ತರ ಆರಾಧ್ಯ ದೇವರಾಗಿದ್ದಾರೆ. ರಾಮನು ವನವಾಸಕ್ಕೆ ಹೋದಾಗ ಪ್ರತಿಯೊಂದು ಸೂಕ್ತ ಸ್ಥಳಗಳಲ್ಲಿ ಶಿವನ ಲಿಂಗ ಪ್ರತಿಷ್ಠಾಪಿಸಿ ತನ್ನ ಭಕ್ತಿಯನ್ನು ಶಿವನಿಗೆ ಅರ್ಪಿಸಿದ್ದಾನೆ. ರಾಮನು ಸ್ಥಾಪಿಸಿದ ಲಿಂಗಗಳೆಲ್ಲವೂ ರಾಮಲಿಂಗೇಶ್ವರ ದೇವಸ್ಥಾನಗಳೆಂದು ಪ್ರಖ್ಯಾತಿ ಪಡೆದಿವೆ ಎಂದು ಹೇಳಿದ್ದಾರೆ.
ಶಿವನ ಹೃದಯದಲ್ಲಿ ರಾಮ ಇರುವುದರಿಂದ ಅವರಿಬ್ಬರಲ್ಲಿ ಅವಿನಾಭಾವ ಸಂಬಂಧವಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ವಿಷ್ಣುವಿನ ಅವತಾರ ಶ್ರೀರಾಮ ಹಾಗಾಗಿ ಅವರಿಬ್ಬರ ಆಶೀರ್ವಾದವನ್ನು ಎಲ್ಲರೂ ಆಪೇಕ್ಷಿಸುತ್ತಾರೆ. ರಾಮನ ಜನ್ಮಭೂಮಿ ಅಯೋಧ್ಯೆಯಾಗಿರುವುದರಿಂದ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಾಯೆ ತೆಗೆಯುವಾಗ ಎರಡೂವರೆ ಫೂಟಿನ ಈಶ್ವರ ಲಿಂಗ ಸಿಕ್ಕಿದೆ. ಇದರಿಂದ ರಾಮನು ಅಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜೈಗೈದಿದ್ದನೆಂಬುದು ತಿಳಿಯುತ್ತದೆ. ಈ ಕುರಿತು ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಸಭೆ ನಡೆಸಿ ಅಯೋಧ್ಯೆಯಲ್ಲಿ ಶಿವಲಿಂಗ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ರಾಮ ಮಂದಿರದಲ್ಲಿ ಶಿವನ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟು ಎಲ್ಲ ಶಿವನ ಭಕ್ತರ ಪ್ರೀತಿಗೆ ಪಾತ್ರರಾಗಬೇಕೆಂದು ಶ್ರೀಗಳು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ