ಪ್ರಗತಿವಾಹಿನಿ ಸುದ್ದಿ; ಚಿಂತಾಮಣಿ: ಡ್ರಗ್ಸ್ ದಂಧೆ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲಾ ರಂಗಗಳಲ್ಲೂ ಇದೆ. ಐಟಿ ಬಿಟಿಯಿಂದ ಹಿಡಿದು, ರಾಜಕೀಯ, ಅಧಿಕಾರಿ ವಲಯ, ವ್ಯಾಪಾರಸ್ಥರ ವಲಯ ಹೀಗೆ ಪ್ರತಿ ಕ್ಷೇತ್ರಗಳಲ್ಲಿಯೂ ಇದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ಸಿನಿಮಾದವರು ಗಾಜಿನಮನೆಯಲ್ಲಿರುವುದರಿಂದ ಡ್ರಗ್ಸ್ ದಂಧೆ ವಿಚಾರ ಬಂದಾಗ ಅವರನ್ನೇ ಹೆಚ್ಚು ತೋರಿಸಲಾಗುತ್ತಿದೆ. ಸಮಾಜ ಹುಟ್ಟಿದಾಗಿನಿಂದಲೂ ಈ ಸಾಮಾಜಿಕ ದಾಸ್ಯಗಳಿವೆ. ಅವುಗಳಿಗೆ ಕಡಿವಾಣ ಹಾಕುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.
ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ವಿರೋಧ ಮಾಡುವುದು ಅವರ ಕರ್ತವ್ಯ. ಸಿದ್ದರಾಮಯ್ಯನವರ ಅಪಾದನೆಗಳೆಲ್ಲವೂ ಸುಳ್ಳು. ವಿಜಯೇಂದ್ರ ಸರ್ಕಾರದ ಆಡಳಿತವನ್ನ ದುರುಪಯೋಗ ಮಾಡಿಕೊಳ್ಳುವವರಲ್ಲ. ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರು ಎಂದು ಹೇಳಿದರು.
ಇನ್ನು ಸಿಎಂ ದೆಹಲಿ ಭೇಟಿ ವಿಚಾರಕ್ಕೆ ವಿಶೇಷ ಅರ್ಥ ಬೇಡ. ಕೊರೊನಾ ಲಾಕ್‍ಡೌನ್ ನಿಂದ 6 ತಿಂಗಳಿಂದ ಸಿಎಂ ದೆಹಲಿಗೆ ಹೋಗಿರಲಿಲ್ಲ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರಲಿಲ್ಲ. ಈ ಮಧ್ಯೆ ರಾಜ್ಯದಲ್ಲಿ ನೆರೆ ಪ್ರವಾಹ ಬಂದಿದೆ. ಹೀಗಾಗಿ ಆರ್ಥಿಕ ಪರಿಸ್ಥಿತಿ, ಹಣಕಾಸಿನ ವಿಚಾರ ಮಾತನಾಡಲು ತೆರಳಿದ್ದಾರಷ್ಟೇ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ