*ನಾನು ಯಾವ ಸರ್ಕಾರದಲ್ಲಿದ್ದೇನೆ ಅರ್ಥವಾಗುತ್ತಿಲ್ಲ, ಮಂಪರು ಪರೀಕ್ಷೆ ಮಾಡಿಸಿ ಎಂದ ಬಿ.ಕೆ.ಹರಿಪ್ರಸಾದ್*
ಪ್ರಗತಿವಾಹಿನಿ ಸುದ್ದಿ: ಗೋಧ್ರಾ ರೀತಿ ಘಟನೆ ರಾಜ್ಯದಲ್ಲಿಯೂ ಆಗಬಹುದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಅವರನ್ನು ಇಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿನ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಹರಿಪ್ರಸಾದ್ ವಿಚಾರಣೆ ನಡೆಯಿತು. ಈ ವೇಳೆ ತಮ್ಮದೇ ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಅವರು, ನನಗೆ ವಿವಿಐಪಿ ಟ್ರೀಟ್ ಮೆಂಟ್ ಬೇಡ, ಬೇಕಿದ್ದರೆ ಬಂಧಿಸಿ ಎಂದರು.
ನಾನು ಯಾವ ಸರ್ಕಾರದಲ್ಲಿದ್ದೇನೆ ಎಂದು ಅರ್ಥವಾಗುತ್ತಿಲ್ಲ. ಇದು ಕಾಂಗ್ರೆಸ್ ಸರ್ಕಾರವೇ? ಅಥವಾ ಆರ್.ಎಸ್.ಎಸ್ ಸರ್ಕಾರವೇ? ನಾನು ಯಾವ ಸರ್ಕಾರದಲ್ಲಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ. ಬೇಕಿದ್ದರೆ ಮಂಪರು ಪರೀಕ್ಷೆ ಮಾಡಿ. ನನ್ನ ಜೊತೆಗೆ ವಿಜಯೇಂದ್ರ ಅವರಿಗೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ನನ್ನ ಪರಿಸ್ಥಿತಿಯೇ ಹೀಗಾದರೆ ಇನ್ನು ಕಾರ್ಯಕರ್ತರ ಕಥೆ ಏನು? ಎಂದು ಕಿಡಿಕಾರಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ, ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅನಗತ್ಯವಾಗಿ ನನ್ನ ವಿಚಾರಣೆ ಮಾಡಲಾಗುತ್ತಿದೆ. ನಾನು ಅಂದು ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ರಾಮ ಮಂದಿರಕ್ಕೆ ಹೋಗುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ನಾನು ಹೇಳಿದ್ದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ