ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಂಭ್ರಮಕ್ಕೆ ಇಂದು ಚಾಲನೆ: ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯದ ಹಬ್ಬ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಐತಿಹಾಸಿಕ ಹಾಗೂ ವೈಭವದ ಪರಂಪರೆಯನ್ನು ಹೊಂದಿರುವ ಬೆಳಗಾವಿ ಎಜುಕೇಶನ್ ಸೊಸೈಟಿಯ ‘ಬಿ.ಕೆ. ಮಾಡೆಲ್ ಹೈಸ್ಕೂಲ್’ ಈಗ ನೂರು ವರ್ಷಗಳ ಯಶಸ್ವಿ ಹಾದಿಯನ್ನು ಪೂರೈಸಿದೆ.
ಈ ಐತಿಹಾಸಿಕ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮಗಳಿಗೆ ಶುಕ್ರವಾರ ಸಂಜೆ 5:30ಕ್ಕೆ ಸುಪ್ರಸಿದ್ಧ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮದೊಂದಿಗೆ ಚಾಲನೆ ದೊರೆಯಲಿದೆ.
ಸುಮಾರು ಒಂದು ಶತಮಾನದ ಹಿಂದೆ, ಫೆಬ್ರವರಿ 2, 1925 ರಂದು ಏಳು ಯುವಕರು ಸೇರಿ ಒಂದು ಸಣ್ಣ ಬಾಡಿಗೆ ಕೊಠಡಿಯಲ್ಲಿ ‘ಮಾಡೆಲ್ ಇಂಗ್ಲಿಷ್ ಸ್ಕೂಲ್’ ಅನ್ನು ಪ್ರಾರಂಭಿಸಿದ್ದರು. ಇಂದು ಈ ಸಂಸ್ಥೆಯು ಮಹಾವೃಕ್ಷವಾಗಿ ಬೆಳೆದು ನಿಂತಿದ್ದು, ಏಳು ವಿವಿಧ ಶೈಕ್ಷಣಿಕ ಶಾಖೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ. ಈ ಶತಮಾನೋತ್ಸವದ ಸಂಭ್ರಮಕ್ಕೆ ನಾಳೆ ಆಯೋಜಿಸಲಾಗಿರುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿ ನಾಂದಿ ಹಾಡಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೋತದಾರ್ ಅವರು ಮಾಹಿತಿ ನೀಡಿದ್ದಾರೆ.
ಹಾಸ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ತಮ್ಮ ಚತುರ ಮಾತುಗಳಿಂದ ಜನಾಕರ್ಷಣೆ ಮಾಡುವ ಗಂಗಾವತಿ ಪ್ರಾಣೇಶ್ ಅವರು, ಜೀವನದ ವೈವಿಧ್ಯತೆಗಳನ್ನು ಮಾರ್ಮಿಕವಾಗಿ ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಸಂಸ್ಥೆಯ ಹಾಲಿ-ಮಾಜಿ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷ ಅವಿನಾಶ್ ಪೋತದಾರ್ ಅವರು ವಿನಂತಿಸಿದ್ದಾರೆ.




