*ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ಸಂತ್ರಸ್ತೆ ತಾಯಿ ಸಾವಿನ ಬಗ್ಗೆ ಅನುಮಾನ: ಗೃಹ ಇಲಾಖೆಗೆ ಪತ್ರ ಬರೆದ ಮಹಿಳಾ ಆಯೋಗ*
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ಸಂತ್ರಸ್ತ ಬಾಲಕಿಯ ತಾಯಿ ದಿಢೀರ್ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ದೂರುದಾರೆ ಸಂತ್ರಸ್ತೆ ತಾಯಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಮಹಿಳೆಯ ಸಾವು ಅನುಮಾನ ತಂದಿದೆ. ದೂರು ದಾಖಲಾದ ಬಳಿಕ ಮಹಿಳೆ ಏಕಾಏಕಿ ಸಾವನ್ನಪ್ಪಿದ್ದಾರೆ. ಅವರಿಗೆ ನಿಜಕ್ಕೂ ಆಗಿದ್ದಾದರೂ ಏನು? ಸಾವಿನ ಕಾರಣವೇನು? ಹಾಗೂ ಅಂತ್ಯಸಂಸ್ಕಾರದ ಬಗ್ಗೆ ತನಿಖೆ ನ್ಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ಪೊಲೀಸರಿಗೆ ಮಹಿಳಾ ಆಯೋಗ ಸೂಚಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ, ಸಂತ್ರಸ್ತೆ ತಾಯಿ ಸಾವಿನ ಬಗ್ಗೆ ಅನುಮಾನವಿದೆ. ಆಕೆಯ ಕುಟುಂಬದವರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಮಗಳು ಕೂಡ ಎರಡು ದಿನಗಳ ಹಿಂದಷ್ಟೇ ಭೇಟಿಯಾಗಿ ಹಲವು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಪ್ರಕರಣದಲ್ಲಿ ಮಾಜಿ ಸಿಎಂ ಆಗಿರಲಿ, ಜನಸಾಮಾನ್ಯನೇ ಆಗಿರಲಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು.
ಕ್ಯಾನ್ಸರ್ ಆಗಿರಲಿ ಯಾವುದೆ ಕಾಯಿಲೆಯಾಗಿರಲಿ ಏಕಾಏಕಿ ಸಾವು ಸಂಭವಿಸಲ್ಲ. ಕ್ಯಾನ್ಸರ್ ಆಗಿದ್ದರೆ ವ್ಯಕ್ತಿ ನರಳಿ ನರಳಿ, ಊಟಾಹಾರ ನಿಂತು ಸಾವನ್ನಪ್ಪುತ್ತಾನೆ ಎಂದಿದೆ. ದಿಢೀರ್ ಆಗಿ ಸಾವು ಸಂಭವಿಸಲ್ಲ. ಇನ್ನು ಮಹಿಳೆಯ ಶವ ಹಸ್ತಾಂತರದ ವೇಳೆಯೂ ಹಲವು ಲೋಪಗಳು ಕಂಡುಬಂದಿವೆ. ಅಲ್ಲದೇ ಮಹಿಳೆಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಕುಟುಂಬದವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಗಾಗಿ ಪೊಲಿಸರು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ