
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮತ್ತೆ ನಾನು ಸದನಕ್ಕೆ ಬರುವುದಿಲ್ಲ ಎಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡುತ್ತಾ ಭಾವುಕರಾದ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಮತ್ತೆ ನಾನು ಸದನಕ್ಕೆ ಬರುವುದೂ ಇಲ್ಲ ಎಂದು ಭಾವುಕರಾದರು. ಈ ವೇಳೆ ವಿಪಕ್ಷ ಸದಸ್ಯರಾದ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ, ಜೆಡಿಎಸ್ ನ ಶಿವಲಿಂಗೇಗೌಡರು ಯಡಿಯೂರಪ್ಪ ಮತ್ತೆ ಚುನಾವಣೆಗೆ ನಿಂತು ಗೆಲ್ಲಬೇಕು ಎಂದು ಒತ್ತಾಯಿಸಿದರು.
ಈ ವೇಳೆಯಡಿಯೂರಪ್ಪ, ಮತ್ತೆ ನಾನು ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ, ಸದನದ ಒಳಕ್ಕೆ ಬರುವುದೂ ಇಲ್ಲ, ಒಂದು ರೀತಿಯಲ್ಲಿ ಇದು ವಿದಾಯದ ಭಾಷಣ ಎಂದು ಹೇಳುತ್ತಾ ಗದ್ಗದಿತರಾದರು.
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಬಿಜೆಪಿ ಬಹುಮತದಿಂದ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಮತ್ತೆ ವಿಪಕ್ಷದಲ್ಲಿಯೇ ಕೂರುವುದು ನಿಶ್ಚಿತ ಎಂದರು.
ಇದೇ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ ನ್ನು ಸ್ವಾಗತಿಸುತ್ತೇನೆ. ಅವರು 7ನೇ ವೇತನ ಆಯೋಗ ಜಾರಿ ಬಗ್ಗೆ ಘೋಷಣೆ ಮಾಡಬೇಕು. ಸರ್ಕಾರಿ ನೌಕರರು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನಾನು ಸಹ ಹಣಕಾಸು ಸಚಿವನಾಗಿ ಹಲವು ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ, ಸಂಪನ್ಮೂಲ ಕ್ರೂಡಿಕರಣ, ಜನರ ನಿರೀಕ್ಷೆ, ಪ್ರಾದೇಶಿಕವಾರು ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಬೇಕು. ಸಿಎಂ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು
ಸಂಪನ್ಮೂಲ ಕ್ರೂಢಿಕರಣದಲ್ಲಿ ಶೇ.17ರಷ್ಟು ಚೇತರಿಕೆಯಾಗಿದೆ. ಸಿದ್ದರಾಮಯ್ಯ ಬಜೆಟ್ ನೋಡಿ ವಾಸ್ತವಾಂಶ ಹೇಳುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಿಲ್ಲ ಇದು ನನಗೆ ನೋವು ತಂದಿದೆ ಎಂದರು.
*7ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಸಿಎಂ ಮಹತ್ವದ ಸಂದೇಶ*
https://pragati.taskdun.com/7th-pay-commissionopsstate-govt-employeescm-basavaraj-bommai/