Latest

*ಸಿದ್ದರಾಮಯ್ಯ ಕಾರ್ಯವೈಖರಿ ಶ್ಲಾಘಿಸಿದ ಮಾಜಿ ಸಿಎಂ; ದೇವೇಗೌಡರು ನಮಗೆ ಆದರ್ಶ ಎಂದ ಯಡಿಯೂರಪ್ಪ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕೊನೆ ವಿಧಾನಮಂಡಲ ಅಧಿವೇಶನದಲ್ಲಿ ತಮ್ಮ ವಿದಾಯದ ಭಾಷಣ ಮಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಷ್ಟು ವರ್ಷಗಳ ಕಾಲ ಸದನದ ಒಳಗೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕೆ ಶಿಕಾರಿಪುರ ತಾಲೂಕಿನ ಜನರಿಗೆ ಚಿರರುಣಿಯಾಗಿರುತ್ತೇನೆ ಎಂದರು. ಇದೇವೇಳೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರು, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಶ್ಲಾಘಿಸಿದರು.

ಇದು ನನ್ನ ಕೊನೆ ಅಧಿವೇಶನ. ನಾನು ಮತ್ತೆ ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಘೋಷಿಸಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸದನದ ಹೊರ ಇದ್ದು ಪ್ರಯತ್ನಿಸುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಆಶಯ ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು. ಇಷ್ಟು ವರ್ಷಗಳ ಕಾಲ ವಿಧನಸಭೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಶಿಕಾರಿಪುರ ಜನತೆಗಾಗಿ ಕೊನೆ ಉಸಿರಿರುವವರೆಗೂ ಹೋರಾಡುತ್ತೇನೆ ಎಂದರು.

ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣ ಆರಂಭವಾಗುತ್ತಿದೆ. ಫೆ.27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತೇನೆ ಎಂದು ಹೇಳಿರುವುದು ಸಂತಸದ ಜೊತೆಗೆ ತೃಪ್ತಿ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದನಕ್ಕೆ ಮಹಿಳೆಯರು ಆಯ್ಕೆಯಾಗಿ ಬರಬೇಕು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಇದೇ ವೇಳೆ ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ ಅವರನ್ನು ನೆನಪಿಸಿಕೊಂಡ ಮಾಜಿ ಸಿಎಂ ಯಡಿಯೂರಪ್ಪ, ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಆರ್ ಎಸ್ ಎಸ್ ನಲ್ಲಿ ಸಿಕ್ಕಿದ ತರಬೇತಿ. ಏಕಾಂಗಿಯಾಗಿ ಹೋರಾಟ ನಡೆಸಿ ಪಕ್ಷ ಸಂಘಟನೆ ಮಾಡಿದ್ದೆ ಎಂದು ಹೇಳಿದರು.

ನನಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆದರ್ಶ. ನನಗೆ ಮಾತ್ರವಲ್ಲ ನಮ್ಮೆಲ್ಲರಿಗೂ ದೇವೇಗೌಡರು ಆದರ್ಶ. ಅವರು ಈ ವಯಸ್ಸಿನಲ್ಲಿಯೂ ದೇಶ, ರಾಜ್ಯದ ಬಗ್ಗೆ ಚಿಂತನೆ ಮಾಡುತ್ತಾರೆ. ಸಲಹೆ ಸೂಚನೆಗಳನ್ನು ನೀಡುತ್ತಾರೆ. ಸಮಸ್ಯೆಗಳ ಬಗ್ಗೆ ಅಧ್ಯಯನಗಳನ್ನು ಮಾಡುತ್ತಾರೆ. ಮಾರ್ಗದರ್ಶನಗಳನ್ನು ನೀಡುತ್ತಾರೆ. ದೇವೇಗೌಡರನ್ನು ನೋಡಿ ನಾವು ಕಲಿಯಬೇಕಿರುವುದು ಬಹಳ ಇದೆ ಎಂದರು.

ಇನ್ನು ಸಿಎಂ ಬೊಮ್ಮಾಯಿ ಅವರ ಆಡಳಿತ ವೈಖರಿಯೂ ಉತ್ತಮವಾಗಿದೆ. ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಹಾಡಿ ಹೊಗಳಿದ ಯಡಿಯೂರಪ್ಪ, ಸಭಾಪತಿಯಾಗಿ ಸದನ ನಡೆಸಿದ ರೀತಿ ಎಲ್ಲರಿಗೂ ಮೆಚ್ಚುಗೆಯಾಗಿದೆ. ಈ ಬಾರಿ ನೀವು ಸ್ಪೀಕರ್ ಆಗದೇ ಮಂತ್ರಿಯಾಗಬೇಕು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಆಯ್ಕೆಯಾಗಿ ಬರಬೇಕು ಎಂಬುದು ನಮ್ಮ ಆಸೆ ಎಂದರು.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆಯಲ್ಲಿಯೂ ಹಲವು ಉತ್ತಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಸದನದಲ್ಲಿ ಕಾರ್ಯನಿರ್ವಹಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

*ಕಾಂಗ್ರೆಸ್ ನಿಂದ ಮತ್ತೊಂದು ಮಹತ್ವದ ಘೋಷಣೆ*

https://pragati.taskdun.com/d-k-shivakumarcongress10kg-free-raice-pressmeetsiddaramaiah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button