ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೈದರಾಬಾದ್ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಮುಂಜಾಗೃತ ಕ್ರಮ ಕೈಗೊಂಡಿರುವ ಬೆನ್ನಲ್ಲೇ ಆರೋಗ್ಯ ಸಚಿವ ಶ್ರಿರಾಮುಲು ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ.
ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಶ್ರೀರಾಮುಲು, ರಾಜ್ಯದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ವೈರಸ್ ಹರಡುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ತೆಲಂಗಾಣ, ದೆಹಲಿ ಮತ್ತು ಕೇರಳದಲ್ಲಿ 6 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಓರ್ವ ಕೊರೊನಾ ಪೀಡಿತ ಟೆಕ್ಕಿ ಬೆಂಗಳೂರಿಗೆ ಬಂದು ಹೋದ ಕುರಿತು ಮಾಹಿತಿ ಇದೆ. ಹೀಗಾಗಿ ಈ ಮಾರಣಾಂತಿಕ ವೈರಸ್ ರಾಜ್ಯದಲ್ಲಿ ಹರಡದಂತೆ ತಡೆಯಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೊರೊನಾ ಪತ್ತೆಗಾಗಿ 2 ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಅಲ್ಲದೆ, ಚಿಕಿತ್ಸೆಗೆಂದು ಎಲ್ಲಾ ಸರ್ಕಾರಿ ಮತ್ತು 1690 ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣಾ ಕೇಂದ್ರ ಆರಂಭಿಸಲಾಗಿದೆ. ಕೊರೊನಾ ಪೀಡಿತರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲೂ ಸಹ ಸೂಚಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಕೊರೊನಾ ಕುರಿತು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ