ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷ ಮೂರು ಭಾಗ ಆಗಿದೆ. ಅವರ ನಡುವೆಯೇ ಸಿಎಂ ಹುದ್ದೆಗಾಗಿ ಕಚ್ಚಾಟ ನಡೆಯುತ್ತಿದೆ. ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಸಿದ್ದರಾಮಯ್ಯ. ಅವರ ಮನೆ ಸರಿ ಮಾಡಿಕೊಂಡು ನಂತರ ನಮ್ಮ ಬಗ್ಗೆ ಮಾತನಾಡಲಿ. ಅಧಿಕಾರ ಸಿಕ್ಕಿಲ್ಲ ಎಂಬ ಕಾರಣದಿಂದ ಮತಿ ಭ್ರಮಣೆಯಾಗಿ ಹೀಗೆ ಮಾತನಾಡುತ್ತಿದ್ದಾರೆ. ಮುಂದಿನ ಬಾರಿಯ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲ್ಲುವುದು ಕಷ್ಟ ಎಂದರು.
ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 24 ಗಂಟೆ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಹಗಲುಗನಸು. ಸಿದ್ದರಾಮಯ್ಯ ಬಾಯಿ ಚಟಕ್ಕಾಗಿ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಯತ್ನಾಳ್ ಅವರದ್ದು ಪಕ್ಷದ ನಿಲುವಲ್ಲ ವೈಯಕ್ತಿಕ ನಿಲುವಾಗಿದೆ. ಯಾವುದೇ ಆಗಬೇಕು ಅಂದರೆ ಪಕ್ಷದ ತಿರ್ಮಾನ ಆಗಬೇಕು. ಪಕ್ಷಕ್ಕೆ ಬಂದ ಎಲ್ಲರಿಗೂ ಮುಖ್ಯಮಂತ್ರಿಗಳು ಸ್ಥಾನಮಾನ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂಥವರನ್ನ ತೆಗೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಯವರು ಹೇಳಬೇಕು. ಈ ತೀರ್ಮಾನವನ್ನು ಇಂದು ಅಥವಾ ನಾಳೆ ಸಿಎಂ ತೆಗೆದುಕೊಳ್ಳುತ್ತಾರೆ ಎಂದರು.
ನಾಳೆ 7-8 ಸಚಿವರ ಪ್ರಮಾಣವಚನ ಸ್ವೀಕಾರ; ಸಿಎಂ ಬಿಎಸ್ ವೈ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ