
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕಾಗಿ ರಾಜಕೀಯ ಮಾಡುತ್ತಿರುವ ಶಾಸಕ ಜಮೀರ್ ಅಹ್ಮದ್ ಮಾತು ಮರೆತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲಾ, ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲ. ಒಂದುವೇಳೆ ಯಡಿಯೂರಪ್ಪ ಮತ್ತೆ ಸಿಎಂ ಆದರೆ ನಾನು ಅವರ ಮನೆಯಲ್ಲಿ ವಾಚ್ ಮೆನ್ ಕೆಲಸ ಮಾಡುತ್ತೇನೆ ಎಂದಿದ್ದರು. ಜಮೀರ್ ಮೊದಲು ತಮ್ಮ ಮಾತಿನಂತೆ ನಡೆದುಕೊಳ್ಳಲಿ ಎಂದು ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ವಿರುದ್ಧ ಪ್ರತಿಭಟನೆ ನಡೆಸಲು ಜಮೀರ್ ಬಳ್ಳಾರಿಗೆ ಹೋಗಿದ್ದಾರೆ. ಇಂದು ಬಿಜೆಪಿ ಶಾಸಕರ ಮನೆ ಎದುರು ಧರಣಿ ನಡೆಸಿದ ಮಾತ್ರಕ್ಕೆ ಅವರು ದೊಡ್ಡ ನಾಯಕನಾಗುತ್ತಾರಾ ಎಂದು ಪ್ರೆಶ್ನಿಸಿದರು.
ಜಮೀರ್ ಮೊದಲು ತಾವು ಹೇಳಿದಂತೆ ಯಡಿಯೂರಪ್ಪ ಮನೆ ವಾಚ್ ಮೆನ್ ಆಗಿ ಕೆಲಸ ಮಾಡಲಿ. ಅಲ್ಲದೇ ಬಿಎಸ್‍ವೈ ಸಿಎಂ ಆದರೆ ವಿಧಾನಸೌಧದ ಗೋಡೆ ಒಡೆಯುತ್ತೇನೆ ಎಂದೂ ಹೇಳಿದ್ದರು. ಆದರೆ ಜಮೀರ್ ಅಹ್ಮದ್ ನುಡಿದಂತೆ ನಡೆದುಕೊಂಡಿದ್ದಾರೆಯೇ ? ಕೆಲ ಸಂದರ್ಭದಲ್ಲಿ ಸೋಮಶೇಖರ ರೆಡ್ಡಿ ಮಾತಾಡಿರಬಹುದು. ಆದರೆ ಜಮೀರ್ ಅಹ್ಮದ್ ಅವರೇನು ಕಡಿಮೆ ಇಲ್ಲ ಎಂದು ಕಿಡಿಕಾರಿದರು.
ಬಳ್ಳಾರಿ ಜನರು ಶಾಂತಿಪ್ರಿಯರು. ಆದರೆ ಕಾಂಗ್ರೆಸ್ ನಾಯಕರು ರಾಜಕೀಯ ದುರುದ್ದೇಶಗಳಿಗಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ನಾಯಕರ ಮನೆ ಮುಂದೆ ಧರಣಿ ಮಾಡಲು ಮುಂದಾಗಿದ್ದಾರೆ. ಶಾಸಕರ ಮನೆ ಮುಂದೆ ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತಾರಾ ಎಂದು ಕೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ