ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಭಂಡ ಸರ್ಕಾರ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಹಾಲಿನ ದರ, ವಿದ್ಯುತ್ ದರ, ಅಬಕಾರಿ, ಮುದ್ರಾಂಕ ಶುಲ್ಕ ಸೇರಿದಂತೆ ಎಲ್ಲಾ ದರಗಳನ್ನೂ ಹೆಚ್ಚು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅವರು ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು, ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಇಷ್ಟೆಲ್ಲಾ ತೆರಿಗೆ ಜಾಸ್ತಿ ಮಾಡಿ ಸರ್ಕಾರದ ಆದಾಯ ಜಾಸ್ತಿ ಮಾಡಿಕೊಂಡಿದ್ದೀರಿ. ಇದೆಲ್ಲಾ ಆದಾಯ ಎಲ್ಲಿಗೆ ಹೋಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ, ಸಿಎಂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಗರಣವಾಗಿದ್ದು, ಆ ಹಣ ಆಂಧ್ರ ಪ್ರದೇಶಕ್ಕೆ ಹೋಗಿದೆ. ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿಗಳು ಇದನ್ನು ಗಮನಿಸಬೇಕು. ರಾಜ್ಯದಲ್ಲಿ ಈಗ ಉತ್ತಮ ಮಳೆ ಆಗುತ್ತಿದೆ. ರೈತರು ಟ್ರ್ಯಾಕ್ಟರ್, ಟಿಲ್ಲರ್, ಪಂಪ್ ಸೆಟ್ ಗಳನ್ನು ಉಪಯೋಗಿಸುತ್ತಿದ್ದಾರೆ. ಮೂರೂವರೆ ರೂಪಾಯಿ ಜಾಸ್ತಿ ಮಾಡಿದರೆ ಅದರ ಹೊರೆ ರೈತರ ಮೇಲೆ ಬೀಳುವುದಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ