Politics

*ಹಸುಗಳ ಕೆಚ್ಚಲು ಕೊಯ್ದ ಘಟನೆ: ಬಿಜೆಪಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗೋವು’ ಎಂದರೆ ಸಕಲ ಜೀವರಾಶಿಗಳಿಗೂ ಮಾತೆ. ಹೀಗಾಗಿ ಹಿಂದೂಗಳು ಗೋವನ್ನು ಮಾತೃದೇವತೆಯ ಸ್ಥಾನ ನೀಡಿ ಕಾಮಧೇನು ಎಂದು ಪೂಜಿಸುತ್ತಾರೆ. ಕರ್ನಾಟಕದ ಸಂಸ್ಕೃತಿಯಲ್ಲಿ ಪುಣ್ಯಕೋಟಿಯ ಕಥೆಯ ಹಾಡು ಜಗತ್ತಿನ ಮೂಲೆ ಮೂಲೆಗೂ ಪಸರಿಸಿದೆ. ನಾಡಿದ್ದು ಮಕರ ಸಂಕ್ರಾಂತಿಯಂದು ಗೋ ಮಾತೆಗೆ ಪೂಜೆ ಸಲ್ಲಿಸುವುದು ಹಬ್ಬದ ಆಚರಣೆಯ ಮಹತ್ವದ ಭಾಗ, ಇಂತಹ ಪಾವಿತ್ರ್ಯತೆಯ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿರುವುದು ಅತ್ಯಂತ ಹೇಯ, ಅಮಾನುಷ ಹಾಗೂ ಖೂಳ ಕೃತ್ಯವಾಗಿದ್ದು ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಮೊನ್ನೆಯಷ್ಟೇ ಗೋಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿದೆ, ಇದೆಲ್ಲವೂ ಗೋ ಭಕ್ಷಕ ಜನರ ಓಲೈಕೆಗಾಗಿ ಅಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.

ಇರಿಯುವುದು, ಕತ್ತರಿಸುವುದನ್ನು ಕೇಳಿದ್ದೇವೆ, ಆದರೆ ಮಾತೃ ಕೊರತೆ ನೀಗಿಸಲು ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ಪರಮ ನೀಚ ಕೃತ್ಯಕ್ಕೆ ಇಳಿದಿರುವ ಘಟನೆ ಕರ್ನಾಟಕದ ರಾಜಧಾನಿಯಲ್ಲೇ ನಡೆಯುತ್ತಿದೆ ಎಂದರೆ ಇದರ ಹಿಂದಿರುವ ಕುಮ್ಮಕ್ಕಿನ ಶಕ್ತಿ ಯಾವುದು ಎನ್ನುವುದು ಊಹಿಸಿಕೊಳ್ಳದಷ್ಟು ಕರುನಾಡಿನ ಜನತೆ ಮುಗ್ಧರಲ್ಲ, ಕೃತ್ಯ ನಡೆದಿರುವ ಕ್ಷೇತ್ರ ಯಾರ ಮುಷ್ಠಿಯಲ್ಲಿದೆ, ಈ ರಾಜ್ಯ ಆಳುತ್ತಿರುವವರ ಮನಸ್ಥಿತಿ ಯಾರ ಪರವಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಎಂದು ಗುಡುಗಿದ್ದಾರೆ.

ದಿನದಿಂದ ದಿನಕ್ಕೆ ಹಿಂದೂ ಆಚಾರ -ವಿಚಾರ ಹಾಗೂ ಜನರ ಮೇಲೆ ನಡೆಯುತ್ತಿರುವ ಅಟ್ಟಹಾಸ ಮೇರೆ ಮೀರುತ್ತಿದೆ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಮುಖ್ಯಮಂತ್ರಿ
ಸಿದ್ದರಾಮಯ್ಯ ನವರ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿಯದಿದ್ದರೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರು ಸರ್ಕಾರದೊಳಗಿನ ಶಕ್ತಿಗಳು ಎಂಬ ತೀರ್ಮಾನಕ್ಕೆ ಜನ ಬರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಸಂಸದ ಬಸವರಾಜ್ ಬೊಮ್ಮಾಯಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೋಯ್ದ ದುರುಳರ ಕೃತ್ಯ ಅತ್ಯಂತ ಅಮಾನೀಯವಾಗಿದ್ದು, ಈ ಹೀನ ಕೃತ್ಯವನ್ನು ತೀರ್ವವಾಗಿ ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಗೋಮಾತೆಯನ್ನು ತಾಯಿಯಂತೆ ಪೂಜಿಸುವ ನಮಗೆಲ್ಲ ಈ ಕೃತ್ಯ ಅತ್ಯಂತ ಘಾಸಿಯುಂಟು ಮಾಡಿದೆ. ಸುಗ್ಗಿಯ ಹಬ್ಬ ಮಕರ ಸಂಕ್ರಾತಿಯ ಸಂದರ್ಭದಲ್ಲಿ ರಾಜ್ಯದ ರಾಜ್ಯಧಾನಿಯಲ್ಲಿಯೇ ಇಂತಹ ಅಮಾನವೀಯ ಕೆಲಸ ಮಾಡಿರುವ ಪುಂಡರಿಗೆ ಈ ಸರ್ಕಾರದಲ್ಲಿ ಯಾವುದೇ ಭಯ ಇಲ್ಲದಂತೆ ಕಾಣಿಸುತ್ತಿದೆ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗೋವುಗಳಿಗೆ ಸರಿಯಾದ ರಕ್ಷಣೆ ನೀಡದಿರುವುದು, ಗೋಶಾಲೆಗಳಿಗೆ ಸರಿಯಾದ ಅನುದಾನ ನೀಡದೇ ನಿರ್ಲಕ್ಣ್ಯ ಮಾಡಿರುವುದರ ಪರಿಣಾಮ, ಇಂತಹ ಹೃದಯ ಹೀನ ಕೃತ್ಯಗಳು ನಡೆಯಲು ಪ್ರೇರಣೆ ನೀಡಿದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೂಕ ಪ್ರಾಣಿಗಳ ಮೇಲೆ ಮಾಡಿರುವ ಇಂತಹ ಕೃತ್ಯವನ್ನು ಅಂತಃಕರಣ ಇರುವವರು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಗೋಮಾತೆಯ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ಇಂತಹ ಹೇಯ ಕೃತ್ಯ ಮಾಡಿರುವ ಪುಂಡರನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಿ, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಗಾಯಗೊಂಡಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button