Belagavi NewsBelgaum NewsPolitics

*ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿಲ್ಲ; ಇದು ಪಿಕ್ನಿಕ್‍ನಂತಿದೆ*

ಬಿಜೆಪಿಯಿಂದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸ: ವಿಜಯೇಂದ್ರ

ಪ್ರಗತಿವಾಹಿನಿ ಸುದ್ದಿ: ಇಲ್ಲಿನದು ವಿಧಾನಸಭೆ, ವಿಧಾನಪರಿಷತ್ತಿನ ಅಧಿವೇಶನದಂತಿಲ್ಲ; ಇದು ಪಿಕ್ನಿಕ್‍ನಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.


ಬಾಣಂತಿಯರ ಸರಣಿ ಸಾವು, ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇಂದು ಬೆಳಗಾವಿಯ ಮಾಲಿನಿ ಸಿಟಿ, ಯಡಿಯೂರಪ್ಪ ರಸ್ತೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.


ಬಾಣಂತಿಯರ ಸಾವು ನಿರಂತರವಾಗಿದೆ. ಹಸುಗೂಸುಗಳೂ ಸಾವನ್ನಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಧ್ವನಿ ಇಲ್ಲದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಆ ಕೆಲಸವನ್ನು ಮಾಡಿದ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.


ರೈತ ನಾಯಕ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲ್ಲಿ ಸುವರ್ಣಸೌಧ ನಿರ್ಮಿಸಿ ಉತ್ತರ ಕರ್ನಾಟಕದ ವಿಚಾರದ ಸಮಗ್ರ ಚರ್ಚೆ ಆಗಬೇಕೆಂದು ಆಶಿಸಿದ್ದರು. ಈ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಲೆಂದು ಬಯಸಿದ್ದರು. ಸದನದಲ್ಲಿ ಇವ್ಯಾವ ವಿಚಾರಗಳ ಚರ್ಚೆ ನಡೆಯುತ್ತಿಲ್ಲ. ಶಿಶುಗಳ ಮರಣ ಆಗುತ್ತಿದೆ; ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ; ಇವುಗಳ ಜೊತೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಚರ್ಚೆ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.


ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯನವರ ಸರಕಾರ ನಿಲ್ಲಿಸಿದೆ ಎಂದು ಟೀಕಿಸಿದರು. ಇಂಥ ದರಿದ್ರ ಸರಕಾರ ರಾಜ್ಯದಲ್ಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ತಾಯಂದಿರಿಗೆ ಅವಮಾನ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರವು ನಮ್ಮ ತಾಯಂದಿರ ರಕ್ಷಣೆಗೆ ಬರದೆ ಇರುವ ಸಂದರ್ಭವಿದು. ಒಂದೆಡೆ ಬಾಣಂತಿಯರ ಸಾವಾಗಿದೆ. ಆ ಮಗುವನ್ನು ಯಾರು ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.


ಇದರ ಬಗ್ಗೆಯೂ ಸಿಎಂ, ಕಾಂಗ್ರೆಸ್ ಸರಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೂರಿದರು. ಬಾಣಂತಿಯರ ಸಾವು, ಹಸುಗೂಸುಗಳ ಸಾವು ಸಂಭವಿಸಿದ್ದರೂ, ಸಚಿವರು, ಮುಖ್ಯಮಂತ್ರಿಗಳು ಭೇಟಿ ಕೊಡದೆ ಇರುವ ಕುರಿತು ತೀವ್ರವಾಗಿ ಖಂಡಿಸಿದರು.


ಮುಖ್ಯಮಂತ್ರಿಗಳು, ಈ ಕಾಂಗ್ರೆಸ್ ಸರಕಾರವು ಹಗರಣಗಳ ಸರಮಾಲೆಯಲ್ಲಿ ಸಿಲುಕಿದೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವು ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ನಡೆದಿದ್ದು, ಸಚಿವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದರು. ಮೈಸೂರಿನ ಮುಡಾ ಹಗರಣವು 5 ಸಾವಿರ ಕೋಟಿಗೂ ಹೆಚ್ಚು ಮೊತ್ತದ್ದು. ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ನೇರವಾಗಿ ಹಗರಣದಲ್ಲಿ ಭಾಗಿಯಾಗಿದೆ ಎಂದು ಟೀಕಿಸಿದರು.
ಬಡವರ ಪಾಲಾಗಬೇಕಿದ್ದ 62 ಕೋಟಿ ಮೌಲ್ಯದ ನಿವೇಶನಗಳು ಸ್ವತಃ ಮುಖ್ಯಮಂತ್ರಿಗಳ ಕುಟುಂಬದ ಪಾಲಾಗಿತ್ತು. ಇದರ ವಿರುದ್ಧ ಬಿಜೆಪಿ ಪಾದಯಾತ್ರೆಯನ್ನೂ ಸಂಘಟಿಸಿ ಹೋರಾಟ ಮಾಡಿತ್ತು ಎಂದು ವಿವರಿಸಿದರು.


ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಸಿ.ಮಂಜುಳಾ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎನ್.ರವಿಕುಮಾರ್, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ,ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮಾಜಿ ಶಾಸಕರಾದ ರೂಪಾಲಿ ನಾಯ್ಕ್, ಶಾಸಕರಾದ ಭಾಗೀರಥಿ ಮುರಳ್ಯ, ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಎಚ್ ವಿಶ್ವನಾಥ್, ಹೇಮಲತಾ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಸುವರ್ಣ, ಶ್ರೀಮತಿ ಶೋಭಾ ನಿಸ್ಸೀಮ್ ಗೌಡ, ಉಪಾಧ್ಯಕ್ಷೆ ಶ್ರೀಮತಿ ಶಾಂಭವಿ ಅಶ್ವಥಪುರ, ರಾಜ್ಯ ಕಾರ್ಯದರ್ಶಿ ಮಹಿಳಾ ಮೋರ್ಚಾ ಸೋನಾಲಿ ಸರ್ನೋಬತ್, ಬೆಳಗಾವಿ ಮಹಾನಗರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕು.ಶಿಲ್ಪಾ ಕೇಕ್ರೆ, ಬೆಳಗಾವಿ ಗ್ರಾಮಾಂತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಭಸ್ಮೆ ಪಕ್ಷದ ಪ್ರಮುಖರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button