Politics

*ಸಿಎಂ, ಡಿಸಿಎಂ, ಸಚಿವರು ಹಾದಿ ಬೀದಿಯಲ್ಲಿ ಹೊಡೆದಾಡುತ್ತಿದ್ದಾರೆ; ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದ ಬಿ.ವೈ.ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯನವರೇ ಸಚಿವರ ಮೂಲಕ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರ ಹೇಳಿಸಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯನವರ ಬುಡಕ್ಕೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ವಿರುದ್ಧ ಡಿಸಿಎಂ ಹುದ್ದೆ ವಿಚಾರವಾಗಿ ಸಚಿವರ ಮೂಲಕ ಎತ್ತಿಸಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದೆ ಅಲ್ಲವೇ? ಎಂದರು.

ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಇರ್ತಾರೋ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗಬೇಕು, ಜನರ ಸಮಸ್ಯೆ ನಿವಾರಣೆಯಾಗಬೇಕು ನಾವು ಕೇಳಿದರೆ ಉಢಾಫೆ ಉತ್ತರ ನೀಡಿದ್ದಾರೆ. ಜನರು ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಲಿದರು.

ಹಾದಿ, ಬೀದಿಯಲ್ಲಿ ಸಿಎಂ, ಡಿಸಿಎಂ, ಸಚಿವರು ಹೊಡೆದಾಡಿಕೊಳ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಈಗ ಇರುವುದು ಹೊರಾಟದ ದಿನಗಳು. ಮುಂದೆ ನಾವು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಕ್ಕೆ ಸಚಿವರು ಪ್ರತ್ಯುತ್ತರ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಟ್ಟಿಗೆ ಕಾಣುವುದೇನು? ಹೆಗಲ ಮೇಲೆ ಕೈ ಕೈ ಹಾಕಿಕೊಂಡು ಓಡಾಡಿದ್ದೇನು? ಆದರೆ ಈಗ ಒಬ್ಬರಿಗೊಬ್ಬರು ಬುಡ ಕುಯ್ದುಕೊಳ್ಳುವ ಕೆಲಸ ಮಾಡಿಕೊಳ್ತಿದ್ದಾರೆ. ರಸ್ತೆಯಲ್ಲಿ ನಿಂತು ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬರುವ ದಿನಗಳಲ್ಲಿ ಇನ್ನು ಏನೇನು ಆಗುತ್ತೆ ನೋಡಬೇಕು. ನಾವು ನಮ್ಮ ಹೋರಾಟ ಆರಂಭಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಹೇಳಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button