*ಮರಳಿ ತೀರ್ಥಹಳ್ಳಿಗೆ ಅಭಿಯಾನ ಕೈಗೊಳ್ಳಲು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ನಿಮ್ಮ ಲಕ್ಷ್ಯ ನಿಮ್ಮ ಮಣ್ಣಿಗೆ ಸಲ್ಲಬೇಕು.  ನಿಮ್ಮ ಮಣ್ಣಿನ ಗಿಡಕ್ಕೆ, ಊರಿನ ನೆಲಕ್ಕೆ, ಕಲಿತ ಶಾಲೆಗೆ, ತಾಂದೆ ತಾಯಿಗಳಿದ್ದ ಮನೆಗೆ ನ್ಯಾಯವನ್ನು ನೀಡಲು  ಮರಳಿ ತೀರ್ಥಹಳ್ಳಿಗೆ ಎಂಬ ಅಭಿಯಾನವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ಅರಮನೆ ಮೈದಾನದಲ್ಲಿ  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳಿಗಾಗಿ ಆಯೋಜಿಸಿದ್ದ ಮಲೆನಾಡಿಗರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
*ತೀರ್ಥಹಳ್ಳಿ ದೇವರ ದರ್ಶನವಾಗುವ ಸ್ಥಳ*:
ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಪರಿಸರವುಳ್ಳ ವಿಶಿಷ್ಟ ಜಿಲ್ಲೆ. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವವರು ಶ್ರಮಜೀವಿಗಳು. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಒಕ್ಕಲುತನ ಮಾಡುವುದು ಸುಲಭವಲ್ಲ.  ಅಲ್ಲಿನ ಜನರು  ಬುದ್ದಿವಂತರು. ರಾಜಕಾರಣದಲ್ಲಿ ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಜೆ.ಹೆಚ್.ಪಟೇಲ್ ರಿಂದ ಹಿಡಿದು ನಮ್ಮ ನೆಚ್ಚಿನ ನಾಯಕ ಬಿ.ಎಸ್ ಯಡಿಯೂರಪ್ಪ ಅವರ ತನಕ ಜಿಲ್ಲೆಯ  ಕೊಡುಗೆ ಅಪಾರ. ನಾಡಿನ  ಶ್ರೇಷ್ಠ ಸಾಹಿತಿಗಳಾದ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರ ಆದರ್ಶಗಳು ಎಂದಿಗೂ ಪ್ರಸ್ತುತ. ಇಂಥ ಪ್ರದೇಶದಿಂದ ಬಂದವರು ಧನ್ಯರು. ಬೆಂಗಳೂರಿನ ಅಭಿವೃದ್ಧಿಯಲ್ಲಿಯೂ ಶಿವಮೊಗ್ಗದವರ ಬುದ್ದಿವಂತಿಕೆ ಮತ್ತು ಶ್ರಮ ಎರಡೂ ಇದೆ. ಎಲ್ಲಿ ಹೋದರೂ ಆ ಪ್ರದೇಶವನ್ನು ತಮ್ಮದೇ ಎಂದೇ ಭಾವಿಸಿ, ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ತೀರ್ಥಹಳ್ಳಿ ಎಂದರೆ ದೇವರ ದರ್ಶನವಾಗುವ ಸ್ಥಳ, ಅಲ್ಲಿ ದೇವರು  ವಾಸಿಸುವ ಸ್ಥಳ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
*ವಿಎಸ್ ಐಎಲ್ ಪುನಶ್ಚೇತನಕ್ಕೆ ಚಿಂತನೆ*
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದ ನಂತರ ಶಿವಮೊಗ್ಗದ ಚಿತ್ರಣವೇ ಬದಲಾಗಿದೆ.
ಬೆಂಗಳೂರಿನ ನಂತರ ಅತ್ಯಂತ ಸುವ್ಯವಸ್ಥಿತ ನಗರ ಶಿವಮೊಗ್ಗ ಅಲ್ಲಿನ ರಸ್ತೆಗಳನ್ನು ಮತ್ತು ವ್ಯವಸ್ಥೆಗಳು ನೋಡಿದಾಗ ಅದು ಬೆಂಗಳೂರಿಗಿಂತ ಯಾವುದೇ ರೀತಿಯಲ್ಲಿಯೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ಪೇಪರ್ ಮಿಲ್ ಹಾಗೂ ವಿಐ.ಎಸ್‍ಎಲ್ ಗಳಿತ್ತು ಜಾಗತೀಕರಣದಲ್ಲಿ ಅವುಗಳು ಮುಚ್ಚುವ ಪರಿಸ್ಥಿತಿ ಬಂದಿವೆ. ಅಲ್ಲಿನ ನೌಕರರಿಗೆ ಯಾವುದೇ ತೊಂದರೆಯನ್ನು ಕೊಡದೇ ವಿಎಸ್‍ಐಎಲ್ ನ್ನು ಖಾಸಗಿಯವರ ಮೂಲಕ ಪುನಶ್ಚೇತನ ಮಾಡಬೇಕೆಂಬ ಚಿಂತನೆ ನಡೆದಿದೆ, ಬರುವ ದಿನಗಳಲ್ಲಿ ಶುಭ ಸುದ್ದಿ ಶಿವಮೊಗ್ಗದ ಜನತೆಗೆ ಸಿಗಲಿದೆ ಎಂದರು.
*ಶಿವಮೊಗ್ಗ ದೊಡ್ಡ ಪ್ರವಾಸೀ ತಾಣವಾಗಿ ಹೊರಹೊಮ್ಮಲಿದೆ.*
ಶಿವಮೊಗ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ  ಗಾರ್ಮೆಂಟ್ ಉದ್ಯಮವಿದೆ, ಅದಕ್ಕೆ ನೇರವಾಗಿ ಬಿ.ಎಸ್.ಯಡಿಯೂರಪ್ಪ ಅವರು ಕಾರಣ. ಶಿವಮೊಗ್ಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣ ನಿರ್ಮಾಣವಾಗುತ್ತಿದೆ.  ಜೋಗ್ ಜಲಪಾತದಲ್ಲಿಯೂ ಅಂತರರಾಷ್ಟ್ರೀಯ ಮಟ್ಟದ ಪ್ರವಾಸೀತಾಣವಾಗಿ ಅಭಿವೃದ್ಧಿಯಾಗುತ್ತಿದೆ, 270 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಈ ಉದ್ದೇಶಕ್ಕಾಗಿ ಅನುಮೋದಿಸಲಾಗುತ್ತಿದೆ. ರೋಪ್ ವೇ ಮತ್ತು ಇನ್ನಿತರೆ ವ್ಯವಸ್ಥೆಗಳಾಗುತ್ತಿದೆ.  ಶಿವಮೊಗ್ಗ ದೊಡ್ಡ ಪ್ರವಾಸೀ ತಾಣವಾಗಿ ಹೊರಹೊಮ್ಮಲಿದೆ. ಶೈಕ್ಷಣಿಕವಾಗಿ, ಉತ್ತಮ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳು ಶಿವಮೊಗ್ಗದಲ್ಲಿವೆ. ಶಿವಮೊಗ್ಗ ಭವಿಷ್ಯದ ಗಮ್ಯ ತಾಣವಾಗಲಿದೆ.
ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದು, ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಈ ವರ್ಷದಲ್ಲಿ ಬಹಳ ದೊಡ ಅಭಿವೃದ್ಧಿಯನ್ನು  ಜಿಲ್ಲೆ ಕಾಣಲಿದೆ ಎಂದು ಭರವಸೆಯಿತ್ತರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button