Kannada NewsKarnataka NewsLatest

ವಸತಿ ಸೌಲಭ್ಯ: ಕೋರ್ಟ್ ಮೊರೆ ಹೋಗಲು ಬಾಲಚಂದ್ರ ಜಾರಕಿಹೊಳಿ ಚಿಂತನೆ

 ವಸತಿ ಸೌಕರ್ಯಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರತ ಯತ್ನ : ಗೋವಿಂದ ಕೊಪ್ಪದ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ೨೦೧೯ರ ಅಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು ಅಂತಹ ಮನೆಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹೈಡ್/ಡೆಲಿಟ್ ಆದ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಪರಿಹಾರವನ್ನು ದೊರಕಿಸಿಕೊಡಲು ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ತಿಳಿಸಿದರು.

ಈ ಬಗ್ಗೆ ರವಿವಾರ ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ತಿಂಗಳು ಕಾಲ ಫಲಾನುಭವಿಗಳ ವಸತಿ ಸೌಕರ್ಯಕ್ಕಾಗಿ ಸತತವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆಂದು ಹೇಳಿದರು.

ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮನೆಗಳನ್ನು ನೀಡಲಿಕ್ಕೆ ಸಾಧ್ಯವಿಲ್ಲವೆಂದು ಶಾಸಕರಿಗೆ ವಸತಿ ಸಚಿವರು ಹೇಳಿದ್ದಾರೆ. ಇಷ್ಟಾಗಿಯೂ ಶಾಸಕರು ಫಲಾನುಭವಿಗಳಿಗೆ ಪರ್ಯಾಯ ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿಸಲು ಯತ್ನಿಸುತ್ತಿದ್ದಾರೆ. ಫಲಾನುಭವಿಗಳ ಹಿತವೇ ನಮ್ಮ ಶಾಸಕರಿಗೆ ಮುಖ್ಯವಾಗಿದೆ. ಆದರೆ ಇದನ್ನೇ ಕೆಲವರು ಬಂಡವಾಳವನ್ನಾಗಿ ತೆಗೆದುಕೊಂಡು ನದಿ ತೀರದ ಗ್ರಾಮಗಳ ಫಲಾನುಭವಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ದೂರಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಹೈಡ್/ಡೆಲಿಟ್ ಆದ ಮನೆಗಳ ಬಗ್ಗೆ ಚರ್ಚೆ ನಡೆಸಿ ಒತ್ತಡ ಹೇರುತ್ತಿದ್ದಾರೆ. ಹೈಡ್/ಡೆಲಿಟ್ ಆದವುಗಳಲ್ಲಿ ಎ ವರ್ಗದಲ್ಲಿ ೮೯, ಬಿ ವರ್ಗದಲ್ಲಿ ೨೨೧ ಮತ್ತು ಸಿ ವರ್ಗದಲ್ಲಿ ೨೮೦ ಫಲಾನುಭವಿಗಳು ಸೇರಿದಂತೆ ಒಟ್ಟು ೫೯೦ ಫಲಾನುಭವಿಗಳಿಗೆ ಪರಿಹಾರ ದೊರಕಿಸಿಕೊಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೈಡ್/ಡೆಲಿಟ್ ಆದ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ(ಗ್ರಾಮೀಣ) ಯೋಜನೆಯಡಿ ಮನೆಗಳ ಮಂಜೂರಾತಿಗಾಗಿ ಶಕ್ತಿ ಮೀರಿ ಒತ್ತಡ ಹಾಕುತ್ತಿದ್ದಾರೆ. ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿಗಳನ್ನು ಸಹ ಭೇಟಿ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕೆಂಬ ಅಪೇಕ್ಷೆ ಹೊಂದಿರುವ ಶಾಸಕರು ಫಲಾನುಭವಿಗಳಿಗೆ ನ್ಯಾಯ ಸಿಗದಿದ್ದಲ್ಲಿ ಕೋರ್ಟ್‌ಗೆ ಮೊರೆ ಹೋಗುವ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ನದಿ ತೀರದ ಗ್ರಾಮಗಳಾದ ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಹುಣಶ್ಯಾಳ ಪಿಜಿ, ವಡೇರಹಟ್ಟಿ, ಫುಲಗಡ್ಡಿ, ಮಸಗುಪ್ಪಿ, ಧರ್ಮಟ್ಟಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ ಗ್ರಾಮಗಳ ಫಲಾನುಭವಿಗಳ ಹಿತರಕ್ಷಣೆಗೆ ನಮ್ಮ ಶಾಸಕರು ಸದಾ ಬದ್ಧರಿದ್ದಾರೆ. ಇದರಲ್ಲಿ ಕೆಲವರು ರಾಜಕಾರಣ ಬೆರೆಸುತ್ತಿದ್ದಾರೆ. ಫಲಾನುಭವಿಗಳ ವಿಷಯದಲ್ಲಿ ರಾಜಕೀಯ ಸಲ್ಲದು. ಆದ್ದರಿಂದ ಯಾವುದೇ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ನಂಬಿದವರನ್ನು ಬಾಲಚಂದ್ರ ಜಾರಕಿಹೊಳಿ ಅವರು ಎಂದಿಗೂ ಕೈ ಬಿಡುವುದಿಲ್ಲ. ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದುಕೊಂಡು ಕಳೆದ ಎರಡು ದಶಕಗಳಿಂದ ಕ್ಷೇತ್ರದ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಅವರು, ಹೈಡ್/ಡೆಲಿಟ್‌ಗೊಂಡ ಫಲಾನುಭವಿಗಳಿಗೆ ನ್ಯಾಯ ಕೊಡಿಸಿಯೇ ಕೊಡುತ್ತಾರೆ ಎಂಬ ನಂಬಿಕೆ ನಮ್ಮದಾಗಿದೆ. ಒಂದು ವೇಳೆ ಸರ್ಕಾರ ಫಲಾನುಭವಿಗಳಿಗೆ ಮನೆಗಳನ್ನು ನೀಡದಿದ್ದಲ್ಲಿ ಎರಡು ತಿಂಗಳೊಳಗೆ ಯಾವುದಾದರೂ ಯೋಜನೆಯಡಿ ೫೯೦ ಮನೆಗಳನ್ನು ಮಂಜೂರು ಮಾಡಿಸಿ ಕೊಡುತ್ತಾರೆ. ಅಲ್ಲದೇ ಡಾಟಾ ಎಂಟ್ರಿ ಬಾಕಿ ಉಳಿದ ಎ ವರ್ಗ ೮೪, ಬಿ ವರ್ಗ ೨೪೧ ಮತ್ತು ಸಿ ವರ್ಗ ೩೬೮, ಒಟ್ಟು ೬೯೩ ಫಲಾನುಭವಿಗಳು ಇದ್ದು, ಇವರಿಗೂ ಸಹ ವಸತಿ ಸೌಲಭ್ಯಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ೧೨೮೩ ಫಲಾನುಭವಿಗಳು ಸರ್ಕಾರದ ನೆರವಿನ ಭರವಸೆಯಲ್ಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ. ಇದರಿಂದಾಗಿ ಫಲಾನುಭವಿಗಳಿಗೆ ಪರಿಹಾರ ಧನ ವಿಳಂಬವಾಗುತ್ತಿದೆ. ಮೊದಲಿನಿಂದಲೂ ಜನರ ಬಗ್ಗೆ ಅಪಾರ ಕಳಕಳಿವುಳ್ಳ ಶಾಸಕರು ಪ್ರವಾಹ ಸಂದರ್ಭದಲ್ಲಿ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿ ಎಲ್ಲ ರೀತಿಯ ನೆರವು ನೀಡುವ ಮೂಲಕ ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಆದ್ದರಿಂದ ಫಲಾನುಭವಿಗಳು ಯಾವುದೇ ಕಾರಣಕ್ಕೂ ಧೃತಿಗೆಡದೇ ಧೈರ್ಯದಿಂದ ಇರುವಂತೆ ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಕೊಪ್ಪದ ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಶಶಿಕಲಾ ಸಣ್ಣಕ್ಕಿ, ವಾಸಂತಿ ತೇರದಾಳ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ ಅವರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್ : ಗೋಕಾಕ ೧ : ಜಿಪಂ ಸದಸ್ಯ ಗೋವಿಂದ ಕೊಪ್ಪದ ಅವರು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಜಿಪಂ ಸದಸ್ಯರಾದ ಶಶಿಕಲಾ ಸಣ್ಣಕ್ಕಿ, ವಾಸಂತಿ ತೇರದಾಳ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button