
ಯಡಿಯೂರಪ್ಪ ಕರೆಯ ಮೇರೆಗೆ ಬೆಂಗಳೂರಿಗೆ ತೆರಳಿದ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಕ್ಷೇತ್ರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಗಳೂರಿಗೆ ತೆರಳಿದ್ದಾರೆ.
ಈ ಕುರಿತು ಅವರೇ ಮಾಹಿತಿ ನೀಡಿದ್ದಾರೆ. ಅಗಸ್ಟ್ ೬ ರಿಂದ ೧೪ ರವರೆಗೆ ಕ್ಷೇತ್ರದಲ್ಲಿದ್ದುಕೊಂಡು ೩೧ ಪ್ರವಾಹ ಪೀಡಿತ ನದಿ ತೀರದ ಗ್ರಾಮಗಳಿಗೆ ತೆರಳಿ ಸಂತ್ರಸ್ಥರನ್ನು ಭೇಟಿ ಮಾಡಿ ಸಂತೈಸುವ ಕೆಲಸ ಮಾಡಿದ್ದೇನೆ. ಎಲ್ಲ ಕಾಳಜಿ ಕೇಂದ್ರಗಳಿಗೆ ದಿನನಿತ್ಯ ಭೇಟಿ ನೀಡಿ ಸಂತ್ರಸ್ಥರ ಅಹವಾಲುಗಳನ್ನು ಕೇಳಿದ್ದೇನೆ.
ಕ್ಷೇತ್ರ ಪ್ರವಾಸದಲ್ಲಿರುವ ವೇಳೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ದೂರವಾಣಿ ಕರೆ ಮಾಡಿ ಬುಧವಾರ ಸಂಜೆ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದರಿಂದ ನಾನು ಗೋಕಾಕದಿಂದ ಬೆಂಗಳೂರಿಗೆ ಬರಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ಇತಿಹಾಸದಲ್ಲಿ ಎಂದೂ ಕಂಡರಿಯದ ಪ್ರವಾಹದ ಹಿನ್ನೆಲೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರೂ ಸಹ ನಮ್ಮ ತಾಲ್ಲೂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ನೆರವು ನೀಡಲು ಸಮ್ಮತಿ ಸೂಚಿಸಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ದೆಹಲಿಗೆ ತೆರಳಿದ ಯಡಿಯೂರಪ್ಪ
ಇಂದು ಸಂಜೆ ಸಿಎಂ ಯಡಿಯೂರಪ್ಪನವರು ದೆಹಲಿಗೆ ತೆರಳಿದ್ದು, ರಾಜ್ಯದಲ್ಲಿನ ಭೀಕರ ಪ್ರವಾಹದ ಹಾನಿಯ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಸಮಗ್ರ ವರದಿ ನೀಡಲಿದ್ದಾರೆ. ಜೊತೆಗೆ ಪ್ರವಾಹದ ಸಂಬಂಧ ಕೇಂದ್ರ ಸರ್ಕಾರದ ಅಗತ್ಯ ನೆರವನ್ನು ಕೋರಲಿದ್ದಾರೆಂದು ಅವರು ಹೇಳಿದ್ದಾರೆ.
ಇಂದು ಗುರುವಾರದಂದು ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಪ್ರವಾಹದಿಂದ ಹಾನಿಗೀಡಾದ ಸಮಗ್ರ ವರದಿಯನ್ನು ನೀಡಿದ್ದೇನೆ. ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ರಸ್ತೆಗಳು ಹಾಳಾಗಿವೆ.
ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. ನಿರಾಶ್ರಿತರು ತೊಟ್ಟ ಬಟ್ಟೆಯಲ್ಲಿ ಊರು ಬಿಟ್ಟಿದ್ದರಿಂದ ಬೀದಿ ಪಾಲಾಗಿದ್ದಾರೆ. ಆದ್ದರಿಂದ ನಮ್ಮ ಉಭಯ ತಾಲ್ಲೂಕುಗಳ ಜೊತೆಗೆ ಬೆಳಗಾವಿ ಜಿಲ್ಲೆಗೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರಧನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಯಡಿಯೂರಪ್ಪನವರು ಮನೆಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಪ್ರತಿ ಮನೆಗೆ ೫ ಲಕ್ಷ ರೂ.ಗಳು ಹಾಗೂ ಭಾಗಶಃ ಕುಸಿದ ಮನೆಗಳಿಗೆ ೧ ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಿರಾಶ್ರಿತರು ಭಯಭೀತರಾಗಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಎಂದೆಂದಿಗೂ ನಿರಾಶ್ರಿತರಿಗೆ ಆಸರೆಯಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ತಿಳಿಸಿದ್ದಾರೆ. ಸಂತ್ರಸ್ಥರು ಇನ್ನು ಮುಂದೆ ನೆಮ್ಮದಿಯ ಬದುಕು ಸಾಗಿಸುವಂತೆ ಯಡಿಯೂರಪ್ಪನವರು ಆಶಿಸಿದ್ದಾರೆಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸಂತ್ರಸ್ಥರನ್ನು ಗುರುತಿಸಿ ಪರಿಹಾರ ನೀಡಿ :
ಸಂತ್ರಸ್ತರಿಗೆ ತಾತ್ಕಾಲಿಕವಾಗಿ ೧೦ ಸಾವಿರ ರೂ. ಸರ್ಕಾರ ನೀಡಿದೆ. ಈ ಪರಿಹಾರ ಅರ್ಹ ಸಂತ್ರಸ್ತರಿಗೆ ತಲುಪಿಸಲು ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖಂಡರು ತಮ್ಮ ಕೆಲಸಗಳನ್ನು ಬದಿಗಿಟ್ಟು ವಾರದೊಳಗೆ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಬೇಕು.
ಕುಸಿದ ಮನೆಗಳ ಸಮೀಕ್ಷೆಯನ್ನು ತತಕ್ಷಣ ಮಾಡಬೇಕು. ಇದಕ್ಕಾಗಿ ವ್ಯವಸ್ಥಿತ ತಂಡವೊಂದನ್ನು ರಚಿಸಲಾಗಿದ್ದು, ಈ ತಂಡಗಳಲ್ಲಿ ಆಯಾ ಗ್ರಾಮಗಳ ಮುಖಂಡರು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಟೀಂ ಎನ್‌ಎಸ್‌ಎಫ್ ಇರಲಿದ್ದು, ನಾಳೆಯಿಂದಲೇ ಈ ತಂಡಗಳು ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರದ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಲಿದೆ. ಜೊತೆಗೆ ಕುಸಿದು ಬಿದ್ದ ಮನೆಗಳ ಸಮೀಕ್ಷೆಯೂ ಕೂಡ ನಡೆಯಲಿದೆ. ಒಟ್ಟಿನಲ್ಲಿ ಅರ್ಹ ಸಂತ್ರಸ್ಥರಿಗೆ ಸರ್ಕಾರದ ಪರಿಹಾರ ದೊರೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸಂತ್ರಸ್ಥರಿಗೆ ಸರ್ಕಾರದ ನೆರವು ದೊರಕಿಸಿಕೊಡಲು ಟೀಂ ರೆಡಿ : ನಾಳೆಯಿಂದಲೇ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಮೀಕ್ಷೆ ಕಾರ್ಯ
ಪ್ರವಾಹದಿಂದಾಗಿ ಸ್ವತಃ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ ಹಾಗೂ ಕಛೇರಿ ಸಂಪೂರ್ಣ ಜಲಾವೃತಗೊಂಡಿದ್ದರೂ ಇದಾವುದನ್ನೂ ಲೆಕ್ಕಿಸದೇ ಶಾಸಕರು ಸಂತ್ರಸ್ಥರ ನೆರವಿಗೆ ಧಾವಿಸಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿ ಯಾವುದೇ ಪ್ರಾಣ ಹಾನಿಯಾಗದ ರೀತಿಯಲ್ಲಿ ಕೆಲಸ ಮಾಡಿರುವುದು ಶ್ಲಾಘನೀಯವೆಂದು ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಗುರುವಾರ ಸಂಜೆ ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಜರುಗಿದ ಪ್ರವಾಹ ಪೀಡಿತ ಗ್ರಾಮಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ದೊಡ್ಡ ಪ್ರವಾಹವನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.
ಪ್ರತಿ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ಮುಟ್ಟಿಸಬೇಕೆಂಬುದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಪೇಕ್ಷೆಯಾಗಿದೆ. ಪರಿಹಾರವನ್ನು ಸಂತ್ರಸ್ಥ ಕುಟುಂಬಗಳಿಗೆ ಮುಟ್ಟಿಸುವ ದೃಷ್ಟಿಯಿಂದ ೨೦೦ ಜನರಿರುವ ತಂಡವನ್ನು ರಚನೆ ಮಾಡಲಾಗಿದೆ. ನಾಳೆಯಿಂದಲೇ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ತಾತ್ಕಾಲಿಕ ಪರಿಹಾರ ರೂ. ೧೦ ಸಾವಿರ ಮುಟ್ಟಿಸಲು ಶಾಸಕರು ಸೂಚನೆ ನೀಡಿದ್ದಾರೆ.
ಮಹತ್ತರ ಪಾತ್ರ
ಸಾವಿರಾರು ಸಂಖ್ಯೆಯಲ್ಲಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾಗಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕರು ಸರ್ಕಾರದ ಮಟ್ಟದಲ್ಲಿ ಪರಿಹಾರ ಧನದ ಮೊತ್ತವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆಂದು ಹೇಳಿದರು.
ಗಣ್ಯ ವ್ಯಾಪಾರಸ್ಥ ವಿಕ್ರಮ ಅಂಗಡಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಪ್ರವಾಹದ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ದಾನಿಗಳು ನಮ್ಮಲ್ಲಿಗೆ ಬಂದು ನೆರವು ನೀಡುತ್ತಿದ್ದಾರೆ. ಅಂತಹವರನ್ನು ನಾವು ಗೌರವದಿಂದ ಕಾಣಬೇಕಿದೆ. ಆದರೆ, ಕೆಲವೆಡೆ ದೂರಿನಿಂದ ಬರುವ ದಾನಿಗಳೊಂದಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
ಇದರಿಂದ ಅವರು ನಮ್ಮಲ್ಲಿಗೆ ಬಂದು ನೋಂದುಕೊಂಡು ಹೋಗುತ್ತಿದ್ದಾರೆ. ಇದರಿಂದ ನಮಗೆ ಕೆಟ್ಟ ಹೆಸರು ಬರುತ್ತದೆ. ಮುಂದೆಯಾದರೂ ನಿಮ್ಮ ವರ್ತನೆಯನ್ನು ಬದಲಾಯಿಸಿಕೊಂಡು ಸೌಜನ್ಯಯುತವಾಗಿ ವರ್ತಿಸುವಂತೆ ಸಂತ್ರಸ್ಥರಲ್ಲಿ ಮನವಿ ಮಾಡಿಕೊಂಡರು. ಪ್ರತಿಯೊಂದು ಸಂತ್ರಸ್ಥ ಕುಟುಂಬಕ್ಕೂ ಏನಾದರೂ ವೈಯಕ್ತಿಕವಾಗಿ ಸಹಾಯ ಕಲ್ಪಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಂದಾಗಿದ್ದು, ಅದನ್ನು ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರಲು ಎಲ್ಲರೂ ಸಹಕಾರ ನೀಡುವಂತೆ ಅವರುಗಳು ಕೋರಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಾ ಬಡ್ನಿಂಗಗೋಳ, ಬಿ.ಎಚ್.ರಡ್ಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ರಾಜೇಸಾಬ ಅಂಡಗಿ, ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ, ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ತಾಪಂ ಸದಸ್ಯರು, ಅಧಿಕಾರಿಗಳು ವೇದಿಕೆಯಲ್ಲಿದ್ದರು.
ಫೋಟೋ ಕ್ಯಾಪ್ಷನ್ : ಗೋಕಾಕ ೧ : ಸಂತ್ರಸ್ಥರ ಪರಿಹಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಂಬಂಧ ಇಂದಿಲ್ಲಿ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಪ್ರವಾಹ ಪೀಡಿತ ಗ್ರಾಮಗಳ ಮುಖಂಡರ ಸಭೆಯಲ್ಲಿ ಡಾ.ಸಣ್ಣಕ್ಕಿ ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ